
ಸಾಗರ :- ತಾಲೂಕಿನ ಶರಾವತಿ ಹಿನ್ನೀರಿನ ನಡುಗಡ್ಡೆಯಲ್ಲಿ ಹೊಳೆ ಊಟ ಮುಗಿಸಿ ಮರಳುವಾಗ ತೆಪ್ಪಮಗುಚಿ ಮೂವರು ಯುವಕರು ನಿನ್ನೆ ಕಣ್ಮರೆಯಾಗಿ, ಇನ್ನಿಬ್ಬರು ಈಜಿ ದಡ ಸೇರಿದ್ದರು. ಕಣ್ಮರೆಯಾಗಿದ್ದ ಚೇತನ್ (28), ಸಂದೀಪ್ (30) ಮತ್ತು ರಾಜೀವ್ (38) ಅವರ ಶವಗಳು ಇಂದು ಬೆಳಗ್ಗೆ ಪತ್ತೆಯಾಗಿವೆ.
ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಇಂದು ಬೆಳಗ್ಗೆ ಶರಾವತಿ ಹಿನ್ನೀರಿನಲ್ಲಿ ಶೋಧ ಕಾರ್ಯ ನಡೆಸಿತು. ಹೊಳೆ ಆಳಕ್ಕೆ ತಲುಪಿದ್ದ ಯುವಕರ ಮೃತದೇಹಗಳನ್ನು ಈಶ್ವರ್ ಮಲ್ಪೆ ಅವರು ದಡಕ್ಕೆ ತಂದಿದ್ದಾರೆ. ಯುವಕರ ಮೃತದೇಹ ಕಂಡು ಸುತ್ತಮುತ್ತಲ ಗ್ರಾಮದ ಜನರು ಮರುಗಿದರು.
ಘಟನೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ಕತ್ತಲಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಹಾಗಾಗಿ ರಾತ್ರಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಶೋಧ ನಡೆಸಿದಾಗ ಮೃತದೇಹಗಳು ಪತ್ತೆಯಾಗಿವೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.