google.com, pub-9939191130407836, DIRECT, f08c47fec0942fa0

ಸಾಗರ :- ಎಲ್ಲರೂ ಸೇರಿ ಮಾರಿಕಾಂಬಾ ಜಾತ್ರೆಯನ್ನು ಒಟ್ಟಾಗಿ ಆಚರಿಸೋಣ. ಜತ್ರೆ ಹಿನ್ನೆಲೆಯಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳುತ್ತಿದ್ದೇವೆ ಎಂದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರೂ, ಅರಣ್ಯ ಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ತಿಳಿಸಿದರು.

ಸಾಗರದ ಕೊಪ್ಪಲಗದ್ದೆಯಲ್ಲಿ ಸೋಮವಾರ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾಪನದಿಂದ ನಿರ್ಮಿಸುತ್ತಿರುವ ಮಾರಿಕಾಂಬೆ ಹೆಸರಿನಲ್ಲಿ ಶಾಲೆ ಮತ್ತು ಕಲ್ಯಾಣ ಮಂಟಪ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಮಾರಿಕಾಂಬಾ ಸಮಿತಿ ಜತ್ರೆಗೆ ಸೀಮಿತವಾಗಬಾರದು. ಜತ್ರೆ ಮೂಲಕ ಬರುವ ಆದಾಯವನ್ನು ಅಮ್ಮನ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸಗಳಿಗೆ ವಿನಿಯೋಗಿಸಬೇಕು. ನಾನು ಸಮಿತಿ ಗೌರವಾಧ್ಯಕ್ಷನಾದ ಮೇಲೆ ಈ ಸಂಕಲ್ಪ ಕೈಗೊಂಡಿದ್ದೇನೆ. ಹಿಂದಿನವರು ಏನು ಮಾಡಿದ್ದಾರೆ ಎಂದು ನಾನು ಚರ್ಚಿಸುವುದಿಲ್ಲ. ಆದರೆ ನನ್ನ ಅವಧಿಯಲ್ಲಿ ಇಲ್ಲಿ ಅಭಿವೃದ್ದಿ ಕೆಲಸ ಆಗಬೇಕು ಎಂಬುದು ನನ್ನ ಉದ್ದೇಶವಾಗಿದೆ ಎಂದು ತಿಳಿಸಿದರು.

ಷಪ್ರತಿ ಮೂರು ವರ್ಷಕ್ಕೊಮ್ಮೆ ಮಾರಿಜತ್ರೆ ಬರುತ್ತದೆ. ಸಮಿತಿಯವರು ಈ ಜಗವನ್ನು ಖರೀದಿಸಿ ಹತ್ತಾರು ವರ್ಷ ಕಳೆದು ಹೋಗಿದೆ. ಇಲ್ಲಿ ಅಭಿವೃದ್ದಿ ಕೆಲಸ ಮಾಡಬೇಕು ಎಂದು ನಾನು ಸಮಿತಿ ಗೌರವಾಧ್ಯಕ್ಷನಾಗಿದ್ದಾಗ ಚಿಂತನೆ ನಡೆಸಿದ್ದು. ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ. ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ ಶಾಲೆ ಮತ್ತು ಆರ್ಥಿಕವಾಗಿ ಹಿಂದುಳಿದವರು ಶುಭ ಸಮಾರಂಭ ನಡೆಸಲು ಸಭಾಭವನ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸಮಿತಿಯವರು ನೀಡುವ ಹಣ ಕಡಿಮೆಯಾದರೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಹಿಂದಿನ ಜತ್ರೆಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಜಗ ಕೇವಲು ೫೨ ಲಕ್ಷಕ್ಕೆ ಹೋಗಿತ್ತು. ಈ ಬಾರಿ 1.34 ಕೋಟಿ ರೂ.ಗೆ ಹರಾಜು ಆಗಿದೆ. ಸ್ಟಾಲ್ ಹರಾಜಿನಲ್ಲಿ ಸುಮಾರು 3 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿದೆ. ಇದರ ಜೊತೆಗೆ ವಿವಿಧ ಮೂಲಗಳಿಂದ ಬರುವ ಆದಾಯವನ್ನು ಶಾಲೆ ಮತ್ತು ಸಭಾಭವನ ನಿರ್ಮಾಣ ಕಾಮಗಾರಿಗೆ ಉಪಯೋಗಿಸಲಾಗುತ್ತದೆ. ಸಮಿತಿ ಯಾವುದೇ ದುಂದು ವೆಚ್ಚವನ್ನು ಮಾಡಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಜತ್ರೆ ಹಿನ್ನೆಲೆಯಲ್ಲಿ ಸಚಿವರ ಹತ್ತಿರ ಮಾತನಾಡಿ ಹಣ ಬಿಡುಗಡೆ ಮಾಡಿಸಿ ಎಲ್ಲಾ ವಾರ್ಡ್‌ನಲ್ಲೂ ರಸ್ತೆ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಹೇಳಿದರು.

ಪೌರಾಯುಕ್ತ ಎಚ್.ಕೆ. ನಾಗಪ್ಪ ಮಾತನಾಡಿ, ಶಾಸಕರ ವಿಶೇಷ ಪ್ರಯತ್ನದಿಂದ ಮಾರಿಕಾಂಬಾ ಜತ್ರೆ ಹಿನ್ನೆಲೆಯಲ್ಲಿ ಅಭಿವೃದ್ದಿಗೆ ೨ ಕೋಟಿ ರೂ. ಅನುದಾನ ಮಂಜೂರಾಗಿದೆ. ಕೆಲವರು ೨ ಕೋಟಿ ರೂ. ಹಣ ಬಿಡುಗಡೆಯಾಗಿಲ್ಲ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ಹಣ ಬಿಡುಗಡೆಯಾಗಿದ್ದು, ರಸ್ತೆ ಡಾಂಬಾರೀಕರಣ ಕಾಮಗಾರಿ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಹಿಂದಿನವರು ೮.೫ ಎಕರೆ ಜಗವನ್ನು 22.50 ಲಕ್ಷ ರೂ.ಗೆ ಖರೀದಿ ಮಾಡಿ ಜಗವನ್ನು ಖರೀದಿಸಿದ್ದರು. ನಾವು ಈ ಜಗವನ್ನು ಅಭಿವೃದ್ದಿಪಡಿಸಿದ್ದೇವೆ. ಈ ಭೂಮಿಯನ್ನು ಶಾಸಕರು ಹಸಿರು ಬೆಲ್ಟ್‌ನಿಂದ ವಾಣಿಜ್ಯೋದ್ದೇಶಕ್ಕೆ ಮಾರ್ಪಡಿಸಿ ಕೊಟ್ಟಿದ್ದು, ಕಟ್ಟಡ ಕಾಮಗಾರಿಗೆ ಅನುಕೂಲವಾಗಿದೆ. ಅತಿ ಶೀಘ್ರವಾಗಿ ಕಟ್ಟಡ ನಿರ್ಮಾಣ ಮಾಡಿ ಲೋಕಾರ್ಪಣೆಗೊಳಿಸಲು ಚಿಂತನೆ ನಡೆಸಲಾಗಿದೆ. ಜತ್ರೆ ಯಶಸ್ವಿಯಾಗಿ ನಡೆಯಬೇಕು ಎಂದು ಶಾಸಕರು ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪ ವಿಭಾಗಾಧಿಕಾರಿ ವಿರೇಶ ಕುಮಾರ್, ತಹಶೀಲ್ದಾರ್ ರಶ್ಮಿ ಜೆ.ಎಚ್., ಪೊಲೀಸ್ ಉಪಾಧೀಕ್ಷಕ ಡಾ. ಬೆನಕಪ್ರಸಾದ್, ಪ್ರಮುಖರಾದ ಗಿರಿಧರ ರಾವ್, ರವಿ ಪೋತರಾಜ ಹಾಜರಿದ್ದರು. ಗಣೇಶ್ ಪ್ರಾರ್ಥಿಸಿದರು. ಎಸ್.ವಿ.ಕೃಷ್ಣಮೂರ್ತಿ ಸ್ವಾಗತಿಸಿದರು. ನಾಗೇಂದ್ರ ಕುಮಟಾ ಪ್ರಾಸ್ತಾವಿಕ ಮಾತನಾಡಿದರು. ಸುಂದರ ಸಿಂಗ್ ನಿರೂಪಿಸಿದರು.

Leave a Reply

Your email address will not be published. Required fields are marked *