
ಸಾಗರ :- ತಾಲೂಕಿನ ಪ್ರತಿಷ್ಠಿತ ಸಿಗಂದೂರಿನಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಜನವರಿ 14 ಮತ್ತು 15 ರಂದು ಸಿಗಂದೂರು ಜಾತ್ರಾ ಮಹೋತ್ಸವ ಜರುಗಲಿದೆ. ಸಿಗಂದೂರು ಚೌಡೇಶ್ವರಿ ಸೇತುವೆ ಲೋಕಾರ್ಪಣೆಯಾದ ಬಳಿಕ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದ್ದು, ಈ ಭಾರಿ ಇನ್ನಷ್ಟು ವಿಶೇಷ ಮತ್ತು ವಿಜೃಂಭಣೆಯಿಂದ ನಡೆಸಲು ಸಿದ್ದತೆಗಳು ನಡೆದಿವೆ.
ಏನೇನು ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ…
ಜ. 14 ರಂದು ಬೆಳಗ್ಗೆ ೪ಗಂಟೆಗೆ ಮಹಾಭಿಷೇಕ, ಹೂವು ಮತ್ತು ಆಭರಣ ಅಲಂಕಾರ, 5 ಗಂಟೆಗೆ ಗೋಪೂಜೆ, 6 ಗಂಟೆಗೆ ಗುರುಪೂಜೆ, 7 ಗಂಟೆಗೆ ದೇವಿ ಪಾರಾಯಣ ನಡೆಯಲಿದೆ. 8 ಗಂಟೆಗೆ ರಥಪೂಜೆಯ ಮೂಲಕ ರಥ ಮತ್ತು ಪಲ್ಲಕ್ಕಿಯು ದೇವಿಯ ಮೂಲ ಸ್ಥಾನಕ್ಕೆ ಹೊರಡಲಿದೆ. ಬೆಳಕ್ಕೆ 8.30ಕ್ಕೆ ಚಂಡಿಕಾ ಹೋಮ ಆರಂಭವಾಗಲಿದೆ.
ಮಧ್ಯಾಹ್ನ 12 ಗಂಟೆಗೆ ಜ್ಯೋತಿ ದೇವಾಲಯ ಪ್ರವೇಶ ಮಾಡಲಿದೆ. 12.30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಲಿದೆ. ಮಧ್ಯಾಹ್ನ 1.15ಕ್ಕೆ ಧರ್ಮಸಭೆ ನಡೆಯಲಿದೆ. ಮಧ್ಯಾಹ್ನ 3 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಸಂಜೆ 5 ಗಂಟೆಗೆ ಗುರುಪೂಜೆ ನೆರವೇರಲಿದ್ದು, 6 ಗಂಟೆಗೆ ಗಂಗಾರಥಿ ನೆರವೇರಲಿದೆ.
ಶಿವದೂತ ಗುಳಿಗ ನಾಟಕ ಪ್ರದರ್ಶನ :
ಜ. 14ರಂದು ಸಂಜೆ 7 ಗಂಟೆಯಿಂದ ಶಿವದೂತ ಗುಳಿಗ ನಾಟಕ ಪ್ರದರ್ಶನವಿದೆ. ಬಳಿಕ ಗಾನ ಮಯೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸರಿಗಮಪ ಮತ್ತು ಎದೆತುಂಬಿ ಹಾಡುವೆನು ಸೇರಿದಂತೆ ವಿವಿಧ ಸಂಗೀತದಲ್ಲಿ ಭಾಗಿಯಾಗಿರುವ ಹಲವು ಕಲಾವಿದರು ಭಾಗವಹಿಸಲಿದ್ದಾರೆ.
ಜನವರಿ 15ರಂದು ಮುಂಜನೆಯಿಂದ ಮಹಾಭಿಷೇಕ, ಅಲಂಕಾರ, ಮಹಾಪೂಜೆ ಗುರುಪೂಜೆ, ದೇವಿ ಪಾರಾಯಣ, ಬೆಳಗ್ಗೆ ೮ಕ್ಕೆ ನವಚಂಡಿಕಾ ಹೋಮ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಅಂದು ಸಂಜೆ 5 ಗಂಟೆಗೆ ಶ್ರೀ ಚಕ್ರ ಸಹಿತ ದುರ್ಗಾ ದೀಪ ಪೂಜೆ, ರಂಗಪೂಜೆ ನಡೆಯಲಿದೆ. ಸಂಜೆ ೬ಕ್ಕೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 7ಗಂಟೆಯಿಂದ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯಲ್ಲಿ ಪಾವಂಜಿ ಮೇಳದಿಂದ ದೇವಿ ಲಲಿತೋಪಖ್ಯಾನ ಯಕ್ಷಗಾನ ಪ್ರದರ್ಶನವಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ದೇವಾಲಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.