ಶಿವಮೊಗ್ಗ :- ಸೂಡಾದಲ್ಲಿ ಅವ್ಯವಹಾರ ನಡೆದಿದ್ದರೆ ಅದು ತನಿಖೆಯಾಗಲಿ, ಬೇಡ ಎಂದವರು ಯಾರು? ಆದರೆ, ಎಲ್ಲರ ಅಧ್ಯಕ್ಷಾವಧಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆಯೂ ತನಿಖೆಯಾಗಲಿ. ನನ್ನ ಅವಧಿಯಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾವ ಅಂಜಿಕೆಯೂ ನನಗಿಲ್ಲ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಸೂಡಾದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಅಧ್ಯಕ್ಷನಾಗಿ ಬರುವ ಮೊದಲೇ ಕಾಮಗಾರಿಗಳು ಮುಗಿದು ಹೋಗಿವೆ. ಕೆಲವು ಮಾತ್ರ ಉಳಿದಿದೆ ಅಷ್ಟೇ. ಪ್ರಸನ್ನಕುಮಾರ್ ಹೇಳಿದಂತೆ ಈಗಾಗಲೇ ಇದು ಲೋಕಾಯುಕ್ತ ತನಿಖೆಯಲ್ಲಿದೆ. ಲೋಕಾಯುಕ್ತರು ಖಂಡಿತ ತನಿಖೆ ಮಾಡುತ್ತಾರೆ. ಅವ್ಯವಹಾರವಾಗಿದ್ದರೆ ಶಿಕ್ಷೆಯಾಗಲಿ, ಬೇಡ ಎಂದವರು ಯಾರು? ಅಧಿಕಾರಿಗಳು ತಮ್ಮ ತಮ್ಮ ಕೆಲಸಗಳನ್ನು ಮಾಡಿದ್ದಾರೆ. ಟೆಂಡರ್ ಕರೆಯುವುದು ಸೇರಿದಂತೆ ಅಧಿಕಾರಿಗಳ ವ್ಯಾಪ್ತಿಯಲ್ಲಿ ಇವೆಲ್ಲವೂ ಪಾರದರ್ಶಕವಾಗಿ ನಿಯಮಬದ್ಧವಾಗಿ ನಡೆಯುತ್ತದೆ. ಆಕಸ್ಮಾತ್ ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರನ್ನು ಕಾಪಾಡುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ. ಇದಕ್ಕೆ ನನ್ನ ಸಹಮತವೂ ಇದೆ ಎಂದರು. ದಿನೇಶ್ ಎಂಬ ಅಧಿಕಾರಿಯ ವರ್ಗಾವಣೆ ಕುರಿತಂತೆ ಮಾತನಾಡಿದ ಅವರು, ಅವರ ವರ್ಗಾವಣೆ ಬಗ್ಗೆ ನನಗೆ ಗೊತ್ತಿಲ್ಲ. ವರ್ಗಾವಣೆಯ ವ್ಯಾಪ್ತಿ ನಮಗೆ ಬರುವುದೂ ಇಲ್ಲ. ಆಕಸ್ಮಾತ್ ಆ ವ್ಯಕ್ತಿ ತಪ್ಪು ಮಾಡಿದ್ದರೆ ಅದನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ವರ್ಗಾವಣೆ ಆದರೆಂದರೆ ತಪ್ಪುಗಳು ವರ್ಗಾವಣೆ ಆಗುವುದಿಲ್ಲ. ಹೇಗಿದ್ದರೂ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ನಾವು ಇದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದರು.
ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ಪ್ರಮುಖವಾಗಿ ಉದ್ಯಾನವನಗಳ ಅಭಿವೃದ್ಧಿ ಬಗ್ಗೆ ಗಮನಹರಿಸಿದ್ದೇನೆ. ಸಾಮಾನ್ಯವಾಗಿ ಉದ್ಯಾನವನಗಳು ಸಾರ್ವಜನಿಕ ಹಾಗೂ ಕೆಲವು ಸಂಘ ಸಂಸ್ಥೆಗಳ ಮೇಲ್ವಿಚಾರಣೆಯಲ್ಲಿ ಇರುತ್ತವೆ. ಯಾವುದೇ ಕಾರಣಕ್ಕೂ ಕಾಮಗಾರಿ ಲೋಪವಾಗಲು ಅವರು ಬಿಡುವುದಿಲ್ಲ. ಸ್ವಲ್ಪ ಲೋಪವಾದರೂ ಸಾಕು, ಸರಿಯಾಗಿ ಕೆಲಸ ಮಾಡಿಸುತ್ತಾರೆ. ಈ ನಿಟ್ಟಿನಲ್ಲಿ ಪಾರ್ಕ್ ಅಭಿವೃದ್ಧಿ ಮಾಡಿದ ಬಗ್ಗೆ ನನಗೆ ತೃಪ್ತಿ ಇದೆ ಎಂದರು.
ಈಗಾಗಲೇ ಪ್ರಾಧಿಕಾರದಿಂದ ಅಮೃತ್ ಸಿಟಿ ಯೋಜನೆಗೆ ಅನುಮೋದನೆಗಾಗಿ ಆಯುಕ್ತಾಲಯಕ್ಕೆ ಕಳಿಸಲಾಗಿದೆ. ನಿದಿಗೆ ಗ್ರಾಮದ ಸರ್ವೇ ನಂ. ೨೫, ಕಸಬಾ ಹೋಬಳಿ ಗೋಪಿಶೆಟ್ಟಿ ಗ್ರಾಮದಲ್ಲಿ ವಸತಿ ಬಡಾವಣೆ ನಿರ್ಮಿಸುವ ಸಂಬಂಧ ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ಕೇಳಲಾಗಿದೆ. ನಿದಿಗೆಯಲ್ಲಿ ಸುಮಾರು ೩ ಎಕರೆ, ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿ 31 ಎಕರೆ, ಊರುಗಡೂರು ಗ್ರಾಮದಲ್ಲಿ ೪ ಎಕರೆ, ಭದ್ರಾವತಿ ತಾಲೂಕು ಕಸಬಾ ಗ್ರಾಮದ ಸ.ನಂ. 118ರಲ್ಲಿ 32.21 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸುವ ಸಂಬಂಧ ಪ್ರಸ್ತಾವನೆ ಆಯುಕ್ತಾಲಯಕ್ಕೆ, ಗ್ರಾಮಾಂತರ ಯೋಜನಾ ಇಲಾಖೆಗೆ ಕಳಿಸಲಾಗಿದೆ. ಈ ಎಲ್ಲದಕ್ಕೂ ಅನುಮೋದನೆ ಸಿಗುವ ಭರವಸೆ ನನಗಿದೆ ಎಂದರು.
ಹಾಗೆಯೇ ಸೂಡಾದಿಂದ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ದೇವಕಾತಿಕೊಪ್ಪದ ಸ.ನಂ. 47ರ ಸುಮಾರು 22.30 ಎಕರೆ ವ್ಯಾಪ್ತಿಯಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸುವುದು, ಚನ್ನಮುಂಬಾಪುರ ಗ್ರಾಮದ ಸ.ನಂ. 11ರಲ್ಲಿ 10.23 ಎಕರೆ ವಿಸ್ತೀರ್ಣದ ಕೆರೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಬೊಮ್ಮನಕಟ್ಟೆ ಗ್ರಾಮದ ಸ.ನಂ. 114ರಲ್ಲಿರುವ 24.14 ಎಕರೆ ಕೆರೆ, ಮತ್ತು ಆಲ್ಕೊಳದ ಸ.ನಂ. 10ರಲ್ಲಿರುವ 1.02 ಗುಂಟೆ ಕೆರೆಯ ಮುಂದುವರೆದ ಕಾಮಗಾರಿ, ಭದ್ರಾವತಿ ತಾಲೂಕು ಹೊಸೂರು ಸಿದ್ದಾಪುರ ಗ್ರಾಮದ ಸ.ನಂ 110ರ 24.19 ಎಕರೆ ಕೆರೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಒಟ್ಟಾರೆ ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆರೋಪ ಮಾಡುವವರು ಮಾಡಲಿ ಬಿಡಿ. ನಾನು ಬೇಡ ಎನ್ನುವುದಿಲ್ಲ. ಸೂಡಾಕ್ಕೆ ನಷ್ಟವಾಗುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಬೋಗಸ್ ಬಿಲ್ ಮಾಡಿದ್ದರೆ ಎಲ್ಲರೂ ಮನೆಗೆ ಹೋಗುತ್ತಾರೆ. ಆದರೆ, ಇದಕ್ಕಾಗಿ ನಿರ್ದಿಷ್ಟ ಅವಧಿಯಲ್ಲಿ ಎಂದು ಹೇಳುವುದು ಸರಿಯಲ್ಲ. ಸೂಡಾದ ಆರಂಭದ ಕಾಲದಿಂದಲೂ ತನಿಖೆಯಾಗಲಿ ಎಂದು ಪುನರುಚ್ಛರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಯುಕ್ತ ವಿಶ್ವನಾಥ್ ಎಸ್. ಮುದ್ದಜಿ, ಸದಸ್ಯರಾದ ಪ್ರವೀನ್, ಫ್ರಾನ್ಸಿಸ್, ಅರುಣಾಕುಮಾರಿ, ಇಂಜಿನಿಯರ್ ಬಸವರಾಜ್ ಸೇರಿದಂತೆ ಹಲವರಿದ್ದರು.