google.com, pub-9939191130407836, DIRECT, f08c47fec0942fa0

ಬೆಂಗಳೂರು :- ರಾಜ್ಯ ಆಡಳಿತಾರೂಢ ಕಾಂಗ್ರೆಸ್ ನ ಸಿಎಂ ಕುರ್ಚಿ ಕದನ ಇಂದು ಬೆಳಗಾವಿ ಅಧಿವೇಶನದಲ್ಲಿಯೂ ಪ್ರತಿಧ್ವನಿಸಿದೆ. ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ವಿಚಾರವಾಗಿ ಆರಂಭವಾದ ಮಾತು ಸಿಎಂ ಕುರ್ಚಿ ಗದ್ದಲದ ಮಾತಿನ ಚಕಮಕಿಯೊಂದಿಗೆ ನಿಂತಿತು.

ವಿಧಾನಸಭೆಯಲ್ಲಿ ಅನುದಾನ ಹಂಚಿಕೆ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಪಕ್ಷದ ಶಾಸಕ ಕುಣಿಗಲ್ ರಂಗನಾಥ್ ಅವರೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಡೆಗೆ ಬೆರಳು ತೋರಿಸಿ, ಮಧುಗಿರಿಗೆ ೧೦೦ ಕೋಟಿ ಅನುದಾನ ಕೊಡುತ್ತೀರಿ, ಆದರೆ ನನ್ನ ಕ್ಷೇತ್ರಕ್ಕೆ ಏಕೆ ಅನುದಾನ ನೀಡುತ್ತಿಲ್ಲ? ನನ್ನ ಕ್ಷೇತ್ರಕ್ಕೆ ಹಿಂದೆ ಮಂಜೂರಾಗಿದ್ದ ಒಂದು ಸಾವಿರ ಕೋಟಿ ಅನುದಾನವನ್ನು ತಡೆ ಹಿಡಿಯಲಾಗಿದೆ ಎಂದು ಆಕ್ರೋಶದಿಂದ ಪ್ರಶ್ನಿಸಿದರು. ರಂಗನಾಥ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತರೆಂದೇ ಗುರುತಿಸಿಕೊಂಡಿದ್ದು, ಅವರ ಈ ಪ್ರಶ್ನೆಯು ಸದನದಲ್ಲಿ ಸಿಎಂ ಕುರ್ಚಿ ಕಾದಾಟದ ಕಡೆಗೆ ಹೊರಳಿತು.

ಶಾಸಕ ರಂಗನಾಥ್ ಅವರ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನುದಾನ ಹೆಚ್ಚು ಕಡಿಮೆಯಾಗಿದ್ದರೆ ಪರಿಶೀಲಿಸೋಣ, ಯಾರಿಗೂ ಅನುದಾನ ಕಡಿತ ಮಾಡಿಲ್ಲ ಎಂದು ಸಮಜಯಿಷಿ ನೀಡಿದರು. ಈ ವೇಳೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಧ್ಯಪ್ರವೇಶಿಸಿ, ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟ ಕಾರಣದಿಂದ ರಂಗನಾಥ್ ಅವರಿಗೆ ಉರಿಯುತ್ತಿದೆ ಎಂದು ಲೇವಡಿ ಮಾಡಿದರು.

ಇದಕ್ಕೆ ಕೌಂಟರ್ ಕೊಟ್ಟ ಸಿಎಂ ಸಿದ್ದರಾಮಯ್ಯ, ‘ಐದು ವರ್ಷ ನಾವೇ ಇರುತ್ತೇವೆ. ಜನರು ೧೪೦ ಶಾಸಕರನ್ನು ಆಶೀರ್ವಾದ ಮಾಡಿದ್ದಾರೆ. ಐದು ವರ್ಷ ನಾವೇ ಇರುತ್ತೇವೆ, ೨೦೨೮ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಮುಂದೆಯೂ ನಿಮಗೆ ಜನ ಅವಕಾಶ ಕೊಡಲ್ಲ’ ಟಾಂಗ್ ಕೊಟ್ಟರು. ಈ ವೇಳೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಸಹ ’ ೧೪೦ ಶಾಸಕರು ಸಪೋರ್ಟ್ ಮಾಡಿದ್ದಾರೆ. ಅದಕ್ಕೆ ಐದು ವರ್ಷ ನಾನೇ ಅಂತಿದ್ದಾರೆ’ ಎಂದು ಸಿಎಂ ಪರ ನಿಂತರು.

ಉರಿತಿರೋದಕ್ಕೆ ತುಪ್ಪಾಹಾಕಬೇಡಿ : ಸಿಎಂ-ವಿಪಕ್ಷಗಳ ನಡುವೆ ವಾಕ್ಸಮರ

ಶಾಸಕ ರಂಗನಾಥ್ ಆಕ್ರೋಶದಿಂದ ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು. ಆಗ ಸಿಎಂ, ಉರಿತೀರೋದಕ್ಕೆ ಉಪ್ಪು ಹಾಕಬೇಡ ಎಂದರು. ಆಗ ಅಶೋಕ್ ’ಹಾಗಾದರೆ ಉರಿಯುತ್ತಿದೆಯೇ?’ ಎಂದು ಲೇವಡಿ ಮಾಡಿದರು. ‘ಅದು ಗಾದೆ ಮಾತು ಕಣಯ್ಯ’ ಎಂದ ಸಿಎಂ ಮಾತಿಗೆ, ಸುನಿಲ್ ಕುಮಾರ್ ’ಗಾದೆ ಮಾತೋ.. ಮನಸ್ಸಿನ ಮಾತೋ?’ ಎಂದು ಪ್ರಶ್ನಿಸಿದರು. ಈ ವೇಳೆ ಸಿಎಂ ಮಾತನಾಡಿ, ‘ನೀವು ಎಷ್ಟೇ ಉಪ್ಪಾಕಿದರೂ, ನಮ್ಮ ಶಾಸಕರು ಐದು ವರ್ಷ ಇರಿ ಎಂದು ಜನ ಆಶೀರ್ವಾದ ಮಾಡಿದ್ದಾರೆ. ಐದು ವರ್ಷ ನಾವೇ ಇರುತ್ತೇವೆ’ ಎಂದು ಖಚಿತಪಡಿಸಿದರು.

ಯತ್ನಾಳ್ ಎಷ್ಟು ಸೀಟು ಅನ್ನೋದು ಮುಖ್ಯ ಅಲ್ಲ, ಐದು ವರ್ಷಗಳ ಕಾಲ ಸಿಎಂ ಆಗೋದು ಮುಖ್ಯ ಎಂದು ಕೆಣಕಿದಾಗ, ಸಿದ್ದರಾಮಯ್ಯ ಸ್ಪಷ್ಟವಾಗಿ, ‘ನಾನೇ ಮುಖ್ಯಮಂತ್ರಿ, ಈಗಲೂ ನಾನೇ ಮುಖ್ಯಮಂತ್ರಿ’ ಎಂದು ಘೋಷಿಸಿದರು. ಸುನಿಲ್ ಕುಮಾರ್ ಮತ್ತೆ ಎದ್ದು ನಿಂತು ’ಮುಂದೆಯೂ ನಾನೇ ಮುಖ್ಯಮಂತ್ರಿ ಅಂತ ಹೇಳಿ’ ಎಂದು ಕಾಲೆಳೆದರು.

Leave a Reply

Your email address will not be published. Required fields are marked *