ಶಿವಮೊಗ್ಗ :- ಹವಾಮಾನ ಆಧಾರಿತ ಬೆಳೆ ವಿಮೆಯು ರೈತರಿಗೆ ಸಮರ್ಪಕವಾಗಿ ಲಭಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಕಳೆದ ಬಾರಿ ವಿಮೆ ಪಡೆಯುವಲ್ಲಿ ರೈತರಿಗೆ ಆದ ಅನ್ಯಾಯವನ್ನು ಸಹ ಸರಿಪಡಿಸಬೇಕೆಂದು ಸಂಸದರಾದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.
ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಜಿಲ್ಲೆಯ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ. ಕಳೆದ ಸಾಲಿನಲ್ಲಿ ರೂ. 70-80 ಕೋಟಿಯಷ್ಟು ವಿಮಾ ಮೊತ್ತ ನಷ್ಟವಾಗಿದೆ. ಆದ್ದರಿಂದ ಬೆಳೆ ನಷ್ಟವನ್ನು ನಿರ್ಧರಿಸುವ ಮಳೆ ಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು.ಱ ಜಿಲ್ಲೆಯಲ್ಲಿ ಒಟ್ಟು 280 ಮಳೆ ಮಾಪನ ಕೇಂದ್ರಗಳಿದ್ದು ಇದರಲ್ಲಿ 112 ಅಂದರೆ ಕೇವಲ ಶೇ.೪೦ ರಷ್ಟು ಮಾತ್ರ ಕೆಲಸ ಮಾಡುತ್ತಿವೆ ಎಂದು ವರದಿ ನೀಡಲಾಗಿದೆ. ಈ ಕೇಂದ್ರಗಳ ಬ್ಯಾಕ್ ಅಪ್ ಸ್ಟೇಷನ್ಗಳು ಸಹ ಸರಿ ಇಲ್ಲ. ಈ ಬಗ್ಗೆ ಅಧಿಕಾರಿಗಳು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಹಾಗೂ ರೈತರಿಗೆ ವಿಮೆ ನೀಡುವಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕಳೆದ ಬಾರಿ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದರು.ಱಹಾಗೂ ವಿಮೆ ನಿರ್ಧರಿಸುವ ಟರ್ಮ್ ಶೀಟ್ ಮಾನದಂಡವನ್ನು ಪಾರದರ್ಶಕಗೊಳಿಸಬೇಕು. ಸ್ಥಳೀಯ ಶಾಸಕರೊಂದಿಗೆ ಸಭೆ ನಡೆಸಿ ರೈತರ ಪರವಾಗಿ, ಅವರಿಗೆ ಅನುಕೂಲವಾಗುವಂತೆ ಟರ್ಮ್ ಶೀಟ್ನ್ನು ಸಿದ್ದಪಡಿಸಬೇಕೆಂದು ತಿಳಿಸಿದರು.
ದಿಶಾ ಸಮಿತಿ ಸದಸ್ಯರಾದ ಗುರುಮೂರ್ತಿ ಮಾತನಾಡಿ, ಮಲೆನಾಡಿನಲ್ಲಿ ಎಲೆ ಚುಕ್ಕಿ ರೋಗದಿಂದ ಶೇ. ೪೦ರಷ್ಟು ಬೆಳೆ ಇಲ್ಲ. ಮಧ್ಯಮ ವರ್ಗದ ರೈತರಿಗೆ ತೊಂದರೆಯಾಗುತ್ತಿದ್ದು, ಹವಾಮಾನ ಆಧಾರಿತ ವಿಮೆ ಕುರಿತು ತಕ್ಷಣ ಪರಿಶೀಲಿಸಿ ನಷ್ಟ ಭರಿಸುವಂತೆ ಮನವಿ ಮಾಡಿದರು. ಹಾಗೂ ಅಂಗನವಾಡಿ, ಶಾಲೆ, ಕಚೇರಿಗಳ ಮೇಲ್ಛಾವಣಿ ಸೋರಿಕೆ ಸಾಮಾನ್ಯವಾಗಿದ್ದು, ಈ ಕಟ್ಟಡಗಳ ಕಾಮಗಾರಿ ನಿರ್ವಹಿಸಿದ ಏಜೆನ್ಸಿಗಳನ್ನು ಪರಿಶೀಲಿಸಿ ಬ್ಲಾಕ್ ಲಿಸ್ಟ್ಗೆ ಸೇರಿಸುವ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದರು.
ಸಂಸದರು, ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಎಸ್ ಸಿ ಜನಸಂಖ್ಯೆ ಶೇ. 40 ಕ್ಕಿಂತ ಹೆಚ್ಚಿರುವ ಗ್ರಾಮಗಳಿಗೆ ಸಮಗ್ರ ಅಭಿವೃದ್ದಿ ಕೈಗೊಳ್ಳಲು ಪ್ರಸಕ್ತ ವರ್ಷ 16 ಗ್ರಾಮಗಳು ಆಯ್ಕೆಯಾಗಿದ್ದು ಸರ್ಕಾರ ಇಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಶಿವಮೊಗ್ಗ -ತುಮಕೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಕೆಲಸಗಳನ್ನು ಚುರುಕುಗೊಳಿಸಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಮುಗಿಸಬೇಕು. ಈ ಯೋಜನೆ ಮಂಜೂರಾಗಿ 4-5 ವರ್ಷಗಳಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಕುರಿತು ಸ್ಪಷ್ಟತೆ ನೀಡಬೇಕು. ಹಾಲಿನ ಡೈರಿ ಬಳಿಯ ಅಂಡರ್ ಪಾಸ್ ಕೆಲಸವನ್ನು ತ್ವರಿತ ಗತಿಯಲ್ಲಿ ಮಾಡಬೇಕು. ಇಲ್ಲಿ ಜನರು ಮಕ್ಕಳು ಓಡಾಡುವುದು ಕಷ್ಟವಾಗಿದೆ ಹಾಗೂ ಶಿವನಿ ಮತ್ತು ಬೆಲೇನಹಳ್ಳಿಯಲ್ಲಿಯೂ ಓಡಾಟ ಕಷ್ಟ ಆಗುತ್ತಿದೆ. ಆದ್ದರಿಂದ ಎನ್ಹೆಚ್ ಅಧಿಕಾರಿಗಳು ಕೆಲಸಗಳನ್ನು ಶೀಘ್ರದಲ್ಲಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು. ಗುಂಡಪ್ಪಶೆಡ್ ಅಂಡರ್ ಬ್ರಿಡ್ಜ್ಗೆ ಅನುಮೋದನೆ ದೊರೆತು ಒಂದು ವರ್ಷವಾಗಿದ್ದು ಶೀಘ್ರ ಕಾರ್ಯಾರಂಭ ಮಾಡಬೇಕು ಹಾಗೂ ರೂ. 73 ಕೋಟಿ ವೆಚ್ಚದಲ್ಲಿ ಮಂಜೂರಾಗಿರುವ ಫ್ರೀಡಂ ಪಾರ್ಕ್ ಹಿಂದಿನ ಆರ್ಓಬಿ ಕಾಮಗಾರಿಯನ್ನು ಸಹ ಶೀಘ್ರದಲ್ಲಿ ಆರಂಭಿಸಬೇಕೆಂದು ರೈಲ್ವೆ ಅಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ದಿಶಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ್, ದೇವೇಂದ್ರಪ್ಪ, ಮಹಾದೇವಪ್ಪ, ಸುವರ್ಣ, ಗಿರೀಶ್ ಭದ್ರಾಪುರ, ಆನಂದ್ ಇನ್ನಿತರರಿದ್ದರು.