
ಸಾಗರ :- ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರ ಕಾಲದಲ್ಲಿ, ಅವರ ಅಣ್ಣ ಕುಮಾರ ಬಂಗಾರಪ್ಪ ಸಚಿವರಾಗಿದ್ದ ಸಂದರ್ಭದಲ್ಲಿ ಸೊರಬದಲ್ಲಿ ಇಸ್ಪೀಟ್ ಕ್ಲಬ್ನಂತಹ ಜೂಜಾಟಕ್ಕೆ ಅವಕಾಶ ಇರಲಿಲ್ಲ. ನಾಲ್ಕು ದಶಕಗಳ ನಂತರ ಸೊರಬದಲ್ಲಿ ಇಸ್ಪೀಟ್ ಕ್ಲಬ್ ಪ್ರಾರಂಭವಾಗಿದೆ. ತಮ್ಮ ತಂದೆ ಎಸ್.ಬಂಗಾರಪ್ಪ ಹೆಸರು ಉಳಿಸುವ ಉದ್ದೇಶ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಮೊದಲು ಇಸ್ಪೀಟ್ ಕ್ಲಬ್ ಬಂದ್ ಮಾಡಿಸಲಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದೀಗ ಶಿಕ್ಷಣ ಸಚಿವರಾಗಿ ಊರಿಗೆ ಬುದ್ದಿ ಹೇಳುವ ಸ್ಥಾನದಲ್ಲಿರುವ ಮಧು ಬಂಗಾರಪ್ಪಅವರ ಅವಧಿಯಲ್ಲಿ ಸೊರಬದಲ್ಲಿ ಇಸ್ಪೀಟ್ ಕ್ಲಬ್ ಆಗಿರುವುದು ದುರಂತದ ಸಂಗತಿ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಸಮಗ್ರ ಅಭಿವೃದ್ದಿ ಬಗ್ಗೆ ಕಿಂಚಿತ್ ಗಮನ ಹರಿಸದೆ ಇರುವುದೇ ಸಚಿವರ ಎರಡು ವರ್ಷದ ಸಾಧನೆ ಎಂದು ವ್ಯಂಗ್ಯವಾಡಿದರು.
ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಎರಡು ವರ್ಷದಲ್ಲಿ ರೈತರ ಮೇಲಿನ ಶೋಷಣೆ ಹೊರತುಪಡಿಸಿದರೆ ಯಾವುದೇ ಅಭಿವೃದ್ದಿ ಕೆಲಸಕ್ಕೆ ಒತ್ತು ನೀಡಿಲ್ಲ. ಮಡಸೂರಿನ 7 ರೈತರನ್ನು 13 ದಿನ ಜೈಲಿಗೆ ಕಳಿಸಿದ್ದು, ಹೆನಗೆರೆ ಬಡ ಬ್ರಾಹ್ಮಣ ರೈತ ಕುಟುಂಬದ ಮೇಲೆ ಹಲ್ಲೆ, ಇರುವಕ್ಕಿ ಮೂರು ಬಡ ಬ್ರಾಹ್ಮಣ ಕುಟುಂಬವನ್ನು ಒಕ್ಕಲೆಬ್ಬಿಸಿದ್ದು, ಹೊಸನಗರದಲ್ಲಿ ಎಸ್.ಸಿ. ಮಹಿಳೆ ರುಕ್ಮಿಣಿ ರಾಜು ಎಂಬುವವರ ಶುಂಠಿ ತೋಟ ನಾಶ ಮಾಡಿದ್ದು, ಕೋಟೆಕೊಪ್ಪದಲ್ಲಿ ಮಡಿವಾಳ ಕುಟುಂಬವನ್ನು ಒಕ್ಕಲೆಬ್ಬಿಸಿದ್ದು, ನೆಲ್ಲಿಬೀಡು ಜೈನ ಸಮುದಾಯದ ನವೀನ್ ಜೈನ್ ಎಂಬುವವರ ಬೇಲಿ ತೆರವು, ಆವಿನಹಳ್ಳಿ ಕೇಶವ ಜೋಗಿ ಎಂಬುವವರ ಜಮೀನನ್ನು ಹಮೀದ್ ಎಂಬಾತ ಅತಿಕ್ರಮಿಸಿದ್ದು ಹೀಗೆ ಸಾಲುಸಾಲು ರೈತ ಶೋಷಣೆ ನಡೆಸಿದ್ದೆ ಶಾಸಕರ ಎರಡು ವರ್ಷದ ಸಾಧನೆಯಾಗಿದೆ ಎಂದು ಹೇಳಿದರು.

ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಸಂಸದ ಬಿ.ವೈ. ರಾಘವೇಂದ್ರ ಬಸ್ ಸ್ಟ್ಯಾಂಡ್ ಮಾಡಿದ್ದು ಮಾತ್ರ ಕಾಣುತ್ತದೆ. ಆದರೆ ಸಂಸದರು ಮಾಡಿರುವ ವಿಮಾನ ನಿಲ್ದಾಣ, ತುಮರಿ ಸೇತುವೆ, ಜಿಲ್ಲಾದ್ಯಂತ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ನಿಲ್ದಾಣ ಅಭಿವೃದ್ದಿ ಕಾಮಗಾರಿಗಳು ಬಹುಶಃ ಅವರ ಕಣ್ಣಿಗೆ ಕಾಣುತ್ತಿಲ್ಲ ಎಂದ ಹರತಾಳು, ಎರಡು ವರ್ಷದಿಂದ ಹಸಿರುಮಕ್ಕಿ ಸೇತುವೆ ಕಾಮಗಾರಿ ಯಾಕೆ ಮುಂದುವರೆದಿಲ್ಲ. ನಾನು ಶಾಸಕನಾಗಿದ್ದಾಗ ತಾಂತ್ರಿಕ ಕಾರಣದಿಂದ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆಗದೆ 11 ಕೋಟಿ ರೂ. ಹಣ ಮಂಜೂರು ಮಾಡಿಸಲಾಗಿತ್ತು. ಅಷ್ಟರೊಳಗೆ ಚುನಾವಣೆ ನಡೆದು ನಾನು ಸೋಲಬೇಕಾಯಿತು. ಆದರೆ ಗೋಪಾಲಕೃಷ್ಣ ಬೇಳೂರು ಹಸಿರುಮಕ್ಕಿ ಸೇತುವೆಗೆ ಹೆಚ್ಚಿನ ಹಣ ಯಾಕೆ ತಂದಿಲ್ಲ ಎಂದು ಪ್ರಶ್ನಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಎಲ್ಲರೂ ಎಡವಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿ, ಕಾಗೋಡು ಸಚಿವರಾಗಿ, ಬೇಳೂರು ಮೂರನೇ ಬಾರಿ ಶಾಸಕರಾಗಿ ಹಕ್ಕುಪತ್ರ ಏಕೆ ಕೊಡಿಸಲಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವುದು ನನ್ನ ಆದ್ಯತಾ ವಿಷಯ. ಇದಕ್ಕಾಗಿ ದೆಹಲಿಗೆ ಹೋಗಿ ಸಚಿವರ ಮೇಲೆ ಒತ್ತಡ ತರಲಾಗಿದೆ. ಬೇಳೂರು ಎಷ್ಟು ಬಾರಿ ದೆಹಲಿಗೆ ಹೋಗಿದ್ದಾರೆ. ಅಷ್ಟಕ್ಕೂ ಮಧು ಬಂಗಾರಪ್ಪ, ಗೋಪಾಲಕೃಷ್ಣ ಬೇಳೂರಿಗೆ ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಸರಿಯಾದ ವಿಷಯವೇ ಗೊತ್ತಿಲ್ಲ ಎಂದು ಹಾಲಪ್ಪ ತಿಳಿಸಿದರು.
ಗೋಷ್ಟಿಯಲ್ಲಿ ದೇವೇಂದ್ರಪ್ಪ, ಗಣೇಶ್ ಪ್ರಸಾದ್, ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ರಮೇಶ್ ಎಚ್.ಎಸ್., ಗಿರೀಶ್ ಗುಳ್ಳಳ್ಳಿ, ಸತೀಶ್ ಕೆ., ಸುಜಯ್ ಶೆಣೈ, ಜನಾರ್ದನ್ ಇನ್ನಿತರರು ಹಾಜರಿದ್ದರು.
