google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಸಾಗರ ತಾಲೂಕಿನ ಸಿಗಂದೂರು ಸೇತುವೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕ್ರೈನ್ ಕ್ಲಾಂಪ್ ಕಳಚಿ ಬಿದ್ದು ಒರ್ವ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ.

ಅಸ್ಸಾಂ ರಾಜ್ಯದ ಗೌಹಾಟಿಯ ನಿವಾಸಿ ೩೦ವರ್ಷದ ಖಾಸಿದ್ ಆಲಿ ಎಂಬಾತ ಕಳೆದ ಮಂಗಳವಾರ ಬೆಳಿಗ್ಗೆ ಎಂದಿನಂತೆ ಸೇತುವೆ ಕಾಮಗಾರಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಗಾಳಿಯ ರಭಸಕ್ಕೆ ಕ್ರೈನ್ ಕ್ಲಾಂಪ್ ಕಳಚಿ ಕಾರ್ಮಿಕನ ತಲೆಯ ಮೇಲೆ ಬಿದ್ದಿರುವ ಕಾರಣದಿಂದ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಉಳಿದ ಕಾರ್ಮಿಕರು ಸಾಗರ ಉಪ ವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಕಾರ್ಮಿಕ ಮೃತಪಟ್ಟಿರುವುದು ದೃಢಪಟ್ಟಿದೆ.

ಕಾಮಗಾರಿ ಪ್ರಾರಂಭವಾದಾಗಿನಿಂದ ಸುಮಾರು 200ಕ್ಕೂ ಹೆಚ್ಚು ಕಾರ್ಮಿಕರುಗಳು ಕೆಲಸ ನಿರ್ವಹಿಸುತ್ತಿದ್ದು, ಇದುವರೆಗೂ ಯಾವುದೇ ಅನಾಹುತಗಳು ಆಗಿರುವುದಿಲ್ಲ. ಸೇತುವೆಯ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದ ಈ ಸಂದರ್ಭದಲ್ಲಿ ಕಾರ್ಮಿಕನಾದ ಖಾಸಿದ್ ಆಲಿ ದುರ್ಮರಣಕ್ಕೆ ಈಡಾಗಿದ್ದು, ಬಹಳ ನೋವು ತಂದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ರವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಈ ಅಕಾಲಿಕ ನಿಧನದಿಂದ ಅವರ ಕುಟುಂಬ ವರ್ಗದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಸಿಗಂದೂರು ಚೌಡೇಶ್ವರಿ ದೇವಿ ಕರುಣಿಸಲಿ ಎಂದು ಸಂಸದರು ತಿಳಿಸಿದ್ದಾರೆ. ಸಾಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ನಿನ್ನೆ ಬೆಳಗ್ಗೆ ಬೆಂಗಳೂರು ವಿಮಾನದ ಮೂಲಕ ಅಸ್ಸಾಂ ರಾಜ್ಯದ ಗೌಹಾಟಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಡಲಾಗಿದೆ. ಸಾಗರ ಗ್ರಾಮಾಂತರ ಠಾಣಾ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಘಟನೆ ಯಾಗಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *