ಶಿವಮೊಗ್ಗ: ಮೌಲ್ಯವನ್ನು ಕಡೆಗಣಿಸಿದರೆ ಸಮಾಜ ದುರಂತದತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲ ಭಾಗಿದಾರರು ಸಹ ಮಕ್ಕಳಲ್ಲಿ ಉತ್ತಮ ಮೌಲ್ಯಗಳ ಬೆಳವಣಿಗೆಗಾಗಿ ಶ್ರಮಿಸಬೇಕು ಎಂದು ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತೆ ಭಾಗಿರಥಿ ಹೇಳಿದರು.
ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಟಿವಿ ಹಾಗೂ ಮೊಬೈಲ್ ಮಾಧ್ಯಮಗಳಿಂದ ಮಕ್ಕಳನ್ನು ರಕ್ಷಿಸಬೇಕಾದ ಅನಿವಾರ್ಯತೆ ಇದೆ. ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸಬೇಕು ಎಂದು ತಿಳಿಸಿದರು.
ಮಕ್ಕಳು ಮನೆಯಲ್ಲಿ ಪಾಲಕರನ್ನು ಅನುಕರಿಸುತ್ತಾರೆ. ಮನೆಯಲ್ಲಿ ವಯಸ್ಕರು ಹಿರಿಯರನ್ನು ಗೌರವಧಾರಗಳಿಂದ ಕಾಣುವಂತೆ ನಮ್ಮ ಸಂಸ್ಕೃತಿ ಹಬ್ಬ ಹರಿದಿನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪೋಷಕರು ಕ್ರಮ ವಹಿಸಬೇಕು. ಶಾಲೆಯಲ್ಲೂ ಸಹ ಸಾಮಾಜಿಕ ಮೌಲ್ಯ ಹಾಗೂ ರಾಷ್ಟ್ರೀಯ ಮೌಲ್ಯಗಳ ಬಗ್ಗೆ ಮಕ್ಕಳು ಅರಿಯುವಂತೆ ಮೌಲ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಸಮಾಜದಲ್ಲಿ ಶೈಕ್ಷಣಿಕ ವ್ಯವಸ್ಥೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆ, ಇಲಾಖೆಯ ಜತೆಗೆ ಸಮಾಜದ ಇತರ ಸಂಘ ಸಂಸ್ಥೆಗಳ ಸಹಾಯದ ಅವಶ್ಯಕತೆ ಮತ್ತು ಅಗತ್ಯತೆ, ಸಾಮಾಜಿಕ ಮೌಲ್ಯಗಳು, ವೈಯಕ್ತಿಕ ಮೌಲ್ಯಗಳು, ಕೌಟುಂಬಿಕ ಮೌಲ್ಯಗಳಲ್ಲಿ ಆಗಿರುವ ಸ್ಥಿತ್ಯಂತರಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧನರಾಜ್, ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡುವ ಮಕ್ಕಳ ಕುಟುಂಬ ಸಾಕಷ್ಟು ಕಷ್ಟಕರ ಸ್ಥಿತಿ ಎದುರಿಸುವುದನ್ನು ಕಾಣುತ್ತೇವೆ. ಕಲಿಕಾ ಪರಿಕರಗಳಿಲ್ಲದೆ ಮಕ್ಕಳು ಶಾಲೆಗೆ ಬರುತ್ತಾರೆ. ಅಂತಹ ಮಕ್ಕಳಿಗೆ ಅಗತ್ಯ ಮಾರ್ಗದರ್ಶನ ನೀಡಿ ಸಾಧನೆ ಮಾಡುವಂತೆ ಶಿಕ್ಷಕರು ಪ್ರೇರಣೆ ನೀಡುತ್ತಾರೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದದ್ದು, ದೇಶ ಕಟ್ಟುವ ಕಾಯಕದಲ್ಲಿ ಅವರ ನಿರಂತರ ಶ್ರಮ ಶ್ಲಾಘನೀಯ. ಸಮಾಜದ ಎಲ್ಲರೂ ಸಹ ಶಿಕ್ಷಕರನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
2024-25ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಎಂ. ಭಾಗೀರಥಿ, ವೀಣಾ, ಶೈಲಾಶ್ರೀ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಅಧ್ಯಕ್ಷೆ ಸ್ವಪ್ನಾ ಬದರಿನಾಥ್ ಸನ್ಮಾನಿಸಿ ಶಿಕ್ಷಕರ ಪರಿಚಯ ಮಾಡಿಕೊಟ್ಟರು.
ಮಲ್ಲಿಕಾರ್ಜುನ್ ಕಾನೂರು, ವಿ.ನಾಗರಾಜ್, ರವೀಂದ್ರನಾಥ್ ಐತಾಳ್, ಮೋಹನ್, ಮಹೇಶ್ವರಪ್ಪ, ರಜಿನಿ ಅಶೋಕ್, ಸುನಂದಾ ವೆಂಕಟೇಶ್, ಫ್ರೆಂಡ್ಸ್ ಸೆಂಟರ್ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯರು, ಮಾಜಿ ಅಧ್ಯಕ್ಷರಾದ ಸುಪ್ರಿಯಾ ಜಗನ್ನಾಥ್ ಬಿಂದು ವಿಜಯಕುಮಾರ್, ರಮೇಶ್ ಪಾಲ್ಗೊಂಡಿದ್ದರು. ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಾದ ಫೌಜಿಯ ಶರಾವತ್ ಮತ್ತಿತರರು ಪಾಲ್ಗೊಂಡಿದ್ದರು.