google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಂಪಿಯ ನಿರ್ದೇಶಕರಾದ(ಪುರಾತತ್ತ್ವ ) (ಪ) ಡಾ.ಆರ್.ಶೇಜೇಶ್ವರ ಇವರು ಕ್ಷೇತ್ರ ಕಾರ್ಯ ಕೈಗೊಂಡಾಗ ತೀರ್ಥಹಳ್ಳಿ ತಾಲ್ಲೂಕಿನ ಆರಗದ ವೀರಭದ್ರ ದೇವಾಲಯದ ಆವರಣದಲ್ಲಿ ಸುಮಾರು ಎರಡು ಮೀಟರ್ ಉದ್ದದ ಗ್ರಾನೈಟ್ ಶಿಲೆಯ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆಯಾಗಿದೆ.

ಶಿರ ಛೇದನ ಸ್ಮಾರಕ ಶಿಲ್ಪವು ಎರಡು ಪಟ್ಟಿಕೆಗಳಿಂದ ಕೂಡಿದ್ದು ಕೆಳಗಿನ ಪಟ್ಟಿಕೆಯಲ್ಲಿ ವೇಳಾವಳಿ/ಗರುಡ ಹೋಗುವ ವೀರ ಕುದುರೆಯ ಮೇಲೆ ಕುಳಿತು ಕತ್ತಿಯನ್ನು ಹಿಡಿದಿದ್ದಾನೆ, ಇವನಿಗೆ ಹಿಂಭಾಗದಲ್ಲಿ ಸೇವಕ ಛತ್ರಿಯನ್ನು ಹಿಡಿದಿದ್ದಾನೆ, ಆದ್ದರಿಂದ ಇವನನ್ನು ರಾಜ ಪ್ರಮುಖನೆಂದು ತಿಳಿಯಬಹುದಾಗಿದೆ. ಹಿಂಭಾಗದಲ್ಲಿ ಮಹಿಳೆಯು ಕತ್ತಿಯನ್ನು ಹಿಡಿದು ನಿಂತಿದ್ದಾಳೆ. ಎರಡನೇ ಪಟ್ಟಕೆಯಲ್ಲಿ ಗರುಡ ಹೊಂದತಹ ವೀರನು ವೀರಾಸನದಲ್ಲಿ ನಿಂತಿದ್ದು ರುಂಡವನ್ನು ಕತ್ತರಿಸಲಾಗಿದ್ದು, ಬಲಗೈಯಲ್ಲಿ ಕತ್ತಿಯನ್ನು ಹಿಡಿದು ಮುಂಡದ ಮೇಲೆ ಹಲಗೆಯ ರೀತಿಯನ್ನು ಹೊತ್ತುಕೊಂಡಿದ್ದು ಇದನ್ನು ಕೈಯಲ್ಲಿ ಹಿಡಿದಿರುವಂತಿದೆ. ಈ ಶಿರ ಛೇದನ ಶಿಲ್ಪದ ಪಕ್ಕದಲ್ಲಿ ಮಹಿಳೆಯು ಶಿರ ಛೇದನವಾದ ರುಂಡವನ್ನು ಕೈಯಲ್ಲಿ ಹಿಡಿದು ನಿಂತಿದ್ದಾಳೆ.

ಮೂರನೇ ಪಟ್ಟಿಕೆಯಲ್ಲಿ ಪಟ್ಟಿಕೆಯ ಶಿಲ್ಪಗಳ ಬದಲು ಲಿಂಗದ ರೀತಿಯಲ್ಲಿ ಇರುವ ಕಂಬವಿದ್ದು ಇದರಲ್ಲಿ ಲಿಂಗದ ಉಬ್ಬು ಶಿಲ್ಪವಿದೆ. ಈ ಲಿಂಗದ/ಕಂಬದ ಮೇಲೆ ಸಮತಟ್ಟಾಗಿದೆ. ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪದ ಮಹತ್ವ: ಆತ್ಮಬಲಿದಾನವು ಹಿಂದೂಗಳ ದೃಷ್ಟಿಯಲ್ಲಿ ಮಹತ್ವಪೂರ್ಣವಾಗಿದ್ದು, ಆತ್ಮ ಬಲಿದಾನ ಮಾಡಿಕೊಳ್ಳಲು ಶುಭ ತಿಥಿಗಳು ಒಳ್ಳೆಯವು ಎಂಬ ನಂಬಿಕೆಯಿದ್ದು, ವ್ಯಕ್ತಿಗಳು ತಮ್ಮ ಪ್ರಾಣವನ್ನು ತಾವೇ ತೆಗೆದುಕೊಳ್ಳುವಂತಹ ಅಥವಾ ಇನ್ನೊಬ್ಬರ ಸಹಾಯದಿಂದ ಮಾಡಿಕೊಳ್ಳುವಂತಹದ್ದು ಆತ್ಮ ಬಲಿದಾನ (ದೇಹತ್ಯಾಗ) ಎನ್ನಬಹುದಾಗಿದೆ.

ಆತ್ಮಬಲಿದಾನವು ಸಮಾಜದ ಒಳತಿಗೋಸ್ಕರ ಆಗಿರುವಂತಹದ್ದು ಹಾಗೂ ಪೂರ್ವ ನಿಯೋಜಿತವಾಗಿರುವಂತಹದ್ದು. ಈ ಆತ್ಮ ಬಲಿದಾನದಲ್ಲಿ ಹಲವು ಬಗೆಗಳಿವೆ. ಆತ್ಮಬಲಿದಾನವನ್ನು ಮಾಡಿಕೊಂಡ ವೀರರು ಯಾವುದೇ ಹೋರಾಟದಲ್ಲಿ ಹೋರಾಡಿ ಮಡಿದವರಾಗಿರುವುದಿಲ್ಲ. ಆದರೆ ಇವರು ಯಾವುದೇ ಹೋರಾಟದಲ್ಲಿ ಮಡಿದ ವೀರರಿಗಿಂತ ಕಡಿಮೆಯಿರುವುದಿಲ್ಲ. ಆತ್ಮ ಬಲಿದಾನದಲ್ಲಿ ಚಿತಾಪ್ರವೇಶ, ಜಲಪ್ರವೇಶ, ಊರ್ಧ್ವಪತನದ ಬಗೆಗಳಿವೆ.

ಈ ಆತ್ಮಬಲಿದಾನದಲ್ಲಿ ಸಹಗಮನ ಪದ್ಧತಿ, ನಿಸಿಧಿ ಶಾಸನ ಶಿಲ್ಪಗಳು, ಸೂರ್ಯಗ್ರಹಣ ಶಾಸನ ಶಿಲ್ಪಗಳು ಇದರಲ್ಲಿ ಉರಿ ಉಯ್ಯಲೆ ಶಿಲ್ಪಗಳು, ಶೂಲ ಬಲಿ, ಶಿರ ಛೇದನ (ಬಲಿ) ಶಿಲ್ಪ, ಸಿಡಿದಲೆ ಶಾಸನ ಶಿಲ್ಪಗಳು, ಇರಿತ ಬಲಿ, ಬೆಂಕಿಬಲಿ ಶಿಲ್ಪ, ಕಿಳ್ಗುಂಟೆ, ಗರುಡ ಪದ್ಧತಿ ಹಾಗೂ ವಿಶೇಷವಾಗಿ ಚಾಟಿ ವಿಟನಿಂದ ಆತ್ಮ ಬಲಿದಾನ ಮಾಡಿಕೊಂಡಿದ್ದು, ಇವನ ಜೊತೆಯಲ್ಲಿ ಇವನ ಹೆಂಡತಿಯು ಸಹಗಮನ ಮಾಡಿಕೊಂಡಿರುವ ಆತ್ಮ ಬಲಿದಾನದ ಸ್ಮಾರಕ ಶಿಲ್ಪ, ಮೊದಲಾದ ಆತ್ಮ ಬಲಿದಾನದ ಸ್ಮಾರಕ ಶಾಸನ ಶಿಲ್ಪಗಳು ಕರ್ನಾಟಕಲ್ಲಿ ಕಂಡುಬರುತ್ತವೆ. ಈ ಸ್ಮಾರಕ ಶಿಲ್ಪವು ಇದುವರೆಗೂ ದೊರೆತಿರುವ ಶಿರ ಛೇದನ ಶಿಲ್ಪಗಳಲ್ಲಿ ತುಂಬಾ ಅಪರೂಪದ್ದು, ಈ ಸ್ಮಾರಕ ಶಿಲ್ಪವನ್ನು ಗರುಡ ಸ್ತಂಭವೆಂದು ಕರೆಯಬಹುದು.

ಈ ಗರುಡ ಪದ್ಧತಿಯ ಸ್ಮಾರಕ ಶಿಲ್ಪದ ಬಗ್ಗೆ ಮಾಹಿತಿಯನ್ನು ಒದಗಿಸಿದ ಡಾ.ದೇವರಾಜಸ್ವಾಮಿ, ಡಾ. ಜಗದೀಶ, ಟಿ.ಎಂ. ಕೇಶವ, ಡಾ.ಗಂಗಾಂಬಿಕೆ ಗೋವರ್ಧನ, ರಮೇಶ ಹಿರೇಜಂಬೂರು, ಶಶಿಧರ ಹಾಗೂ ಮೋಹನ್ ಅವರಿಗೆ ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಬಳ್ಳಾರಿ ನಿರ್ದೇಶಕ ಡಾ. ಆರ್. ಶೇಜೇಶ್ವರ ಕೃತಜ್ಞತೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *