ಶಿವಮೊಗ್ಗ :- ಭದ್ರಾವತಿ ತಾಲೂಕು ಬಿ.ಆರ್. ಪ್ರಾಜೆಕ್ಟ್ ನ ಪತ್ರ ಸಂಸ್ಕೃತಿ ಸಂಘಟನೆ ತನ್ನ 25ನೇ ವರ್ಷದ ನೆನಪಿಗಾಗಿ ಬಿ.ಆರ್. ಪ್ರಾಜೆಕ್ಟ್ ನ ಕೆಪಿಸಿ ರಂಗಮಂದಿರದಲ್ಲಿ ನ. 23 ಮತ್ತು 24ರಂದು ಬೆಳ್ಳಿಹಬ್ಬ ಸಮಾರಂಭವನ್ನು ಆಚರಿಸಲಾಗುವುದು ಎಂದು ಸಂಘಟನೆಯ ಸಂಚಾಲಕ ಹೊಸಹಳ್ಳಿ ದಾಳೇಗೌಡ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಮ್ಮ ಸಂಸ್ಥೆಯು ಕಳೆದ 25 ವರ್ಷಗಳಿಂದ ಪತ್ರ ಸಂಸ್ಕತಿಯನ್ನು ಬೆಳೆಸುತ್ತಾ ಬಂದಿದೆ. ಸಾಮಾಜಿಕ ಜಾಲತಾಣ, ದೂರವಾಣಿ, ಮೊಬೈಲ್, ಇತ್ಯಾದಿಗಳ ಆವಿಷ್ಕಾರದಿಂದ ನಾವು ಭಾವನಾತ್ಮಕ ಸಂಬಂಧಗಳನ್ನೇ ಕಳೆದುಕೊಳ್ಳುತ್ತಿದ್ದೇವೆ. ಅದರಲ್ಲೂ ಪತ್ರ ಬರೆಯುವ ಅಭ್ಯಾಸ ದೂರವಾಗಿಬಿಟ್ಟಿದೆ. ಗ್ರಾಮಾಂತರ ಪ್ರದೇಶದ ಅಂಚೆ ಕಚೇರಿಗಳಲ್ಲಿ ಪತ್ರಗಳೇ ಸಿಗುತ್ತಿಲ್ಲ.ಇಂತಹ ಹೊತ್ತಿನಲ್ಲಿ ನಮ್ಮ ಸಂಘಟನೆ ಪತ್ರ ಸಂಸ್ಕತಿಯನ್ನು ಬೆಳೆಸುವ ಮೂಲಕ ಮಾನವೀಯ ಮಲ್ಯಗಳನ್ನು ಬೆಸೆಯುವ ಕೆಲಸ ಮಾಡುತ್ತಿದೆ ಎಂದರು.
ಕಳೆದ 24 ವರ್ಷಗಳಿಂದ ರಾಜ್ಯದ ಎಲ್ಲಾ ಕಡೆಗಳಿಂದ ಪತ್ರ ಮಿತ್ರರನ್ನು ಕಲೆಹಾಕಿ ಪತ್ರ ಮೈತ್ರಿ ಸಮ್ಮಿಲನ ಏರ್ಪಡಿಸಿ ಆ ಮೂಲಕ ಕನ್ನಡದ ಬಗ್ಗೆ ಮತ್ತು ಸಾಹಿತ್ಯ, ಸಂಸ್ಕತಿ ಬಗ್ಗೆ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಈ ಬಾರಿಯೂ ಕೂಡ ಇಂತಹ ಸಮ್ಮಿಲನ ಕಾರ್ಯಕ್ರಮ ಬಿ.ಆರ್.ಪ್ರಾಜೆಕ್ಟ್ ನಲ್ಲಿ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಉಪನ್ಯಾಸ, ಕವಿಗೋಷ್ಠಿ, ಹರಟೆ ಮತ್ತು ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯುತ್ತವೆ. ನಾಡಿನ ವಿವಿಧ ಭಾಗಗಳಿಂದ ಬಂದ ಪತ್ರ ಪ್ರೇಮಿ ಗೆಳೆಯರು ಪರಸ್ಪರ ತಮ್ಮ ಸಂಸ್ಕತಿ ಸಾಹಿತ್ಯ, ಕಲೆ ಮುಂತಾದವುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಎಂದರು.
ಬೆಳ್ಳಿ ಹಬ್ಬದ ಅಂಗವಾಗಿ ಜಿಲ್ಲಾ ಮಟ್ಟದ ಅಂಚೆ ಕಾರ್ಡ್ ಲೇಖನ ಸ್ಪರ್ಧೆಯನ್ನೂ ಕೂಡ ಆಯೋಜಿಸಲಾಗಿದೆ. ಅಂಚೆ ಕಾರ್ಡ್ನಲ್ಲಿ ಬಾಂಧವ್ಯಕ್ಕೆ ಸಂಬಂಧಿಸಿದಂತೆ ತಮ್ಮ ಅನಿಸಿಕೆಗಳನ್ನು ಬರೆಯಬಹುದು. ಇದಕ್ಕೆ ಯಾವುದೇ ವಯೋಮಿತಿ ಇಲ್ಲ. ಆದರೆ, ಬರಹ ಅಂಚೆ ಕಾರ್ಡ್ನಲ್ಲಿಯೇ ಇರಬೇಕು. ಮತತು ನವೆಂಬರ್ 16ರೊಳಗೆ ಅದು ತಲುಪಬೇಕು. ಅತ್ಯುತ್ತಮವಾಗಿ ಬರೆದ 10 ಜನರಿಗೆ 250 ರೂ. ಬಹುಮಾನ ನೀಡಲಾಗುವುದು. ವಿಳಾಸ: ಹೊಸಹಳ್ಳಿ ದಾಳೇಗೌಡ, ನಂ. 4, ಚೌಡಮ್ಮ ಕ್ಯಾಂಪ್, ಸಿಂಗನಮನೆ, ಬಿ.ಆರ್. ಪ್ರಾಜೆಕ್ಟ್, ಶಿವಮೊಗ್ಗ ಜಿಲ್ಲೆ. ಪಿನ್- 577115 ಆಗಿದೆ ಎಂದರು.
ಪತ್ರ ಸಂಸ್ಕತಿ ಸಂಘಟನೆಯು ಪಿಸು ಮಾತು ಎಂಬ ಪತ್ರ ಸಂಸ್ಕತಿ ಮಿತ್ರರ ತ್ರೈಮಾಸಿಕ ಪತ್ರಿಕೆಯನ್ನೂ ಕೂಡ ಕಳೆದ 15 ವರ್ಷಗಳಿಂದ ಹೊರತರುತ್ತಿದೆ. ದೇಶ ಮತ್ತು ವಿದೇಶಗಳು ಸೇರಿ ಸುಮಾರು 1500ಕ್ಕೂ ಹೆಚ್ಚು ಪತ್ರ ಮಿತ್ರ ಗೆಳೆಯರು ಸಂಘಟನೆಯಲ್ಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಕಾಂತೇಶ್ ಕದರಮಂಡಲಗಿ, ಮಹೇಶ್, ಉಮಾ ದಾಳೇಗೌಡ ಇದ್ದರು.