google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ವಕ್ಫ್ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಸರಿಯಲ್ಲ ಎಂದು ರಾಜ್ಯ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬುಲ್ಲಾ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಕೆಲವು ಕೋಮುವಾದಿ ಶಕ್ತಿಗಳು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಮತ್ತು ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ವಕ್ಫ್ ಆಸ್ತಿ ಎಂದರೆ ಮುಸ್ಲಿಂ ಸಮಾಜದ ಹಿರಿಯರು ಮತ್ತು ದಾನಿಗಳು ತಮ್ಮ ಸ್ವಾಧೀನಾನುಭವದಲ್ಲಿದ್ದ ಜಮೀನನ್ನು ಮಸೀದಿ, ಮದರಸಾ, ಖಬರಸ್ಥಾನ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗಾಗಿ ನೀಡಿರುತ್ತಾರೆ. ಇದನ್ನೇ ನಾವು ವಕ್ಫ್ ಆಸ್ತಿ ಎಂದು ಕರೆಯುತ್ತೇವೆ. ಮುಜರಾಯಿ ಇಲಾಖೆ ಆಸ್ತಿಯಂತೆಯೇ ಇದು ಕೂಡ ಇರುತ್ತದೆ. ಯಾವ ಆಸ್ತಿಯೇ ಆಗಲಿ, ಒತ್ತುವರಿ ಆಗಿರುವುದು ನಿಜವಾಗಿರುತ್ತದೆ, ಮತ್ತು ಅಂತಹ ಒತ್ತುವರಿ ಆದುದನ್ನು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳಬೇಕಾಗುತ್ತದೆ. ಕಾನೂನು ಎಲ್ಲಾ ಆಸ್ತಿಗಳ ರಕ್ಷಣೆಗೂ ಒಂದೇ ಆಗಿರುತ್ತದೆ ಎಂದರು.

ಈ ಹಿನ್ನಲೆಯಲ್ಲಿ ಸಚಿವ ಜಮೀರ್ ಅಹಮ್ಮದ್ ಅವರು ಎಲ್ಲೆಲ್ಲಿ ವಕ್ಫ್ ಆಸ್ತಿ ಒತ್ತುವರಿ ಆಗಿದೆಯೋ ಅಲ್ಲಲ್ಲಿ ಕಾನೂನಿನ ಪ್ರಕಾರ ಅದನ್ನು ಮತ್ತೆ ಸೇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಹಾಗೆಯೇ ಆಕಸ್ಮಾತ್ ವಕ್ಫ್ ಹೆಸರಿನಲ್ಲಿ ಏನಾದರೂ ಆಸ್ತಿಗಳು ಸೇರಿದ್ದರೆ ಅದನ್ನು ಕೂಡ ಕಾನೂನು ಮೂಲಕವೇ ಬಗೆಹರಿಸಿಕೊಳ್ಳಬೇಕಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಕಾನೂನುಗಳು ಇದ್ದರೂ ಕೂಡ ಶಿವಮೊಗ್ಗದ ಶಾಸಕ ಚನ್ನಬಸಪ್ಪ ಅವರು ಸಚಿವ ಜಮೀರ್ ಅಹಮ್ಮದ್ ಅವರಿಗೆ ಶಿವಮೊಗ್ಗಕ್ಕೆ ಬರಬೇಡಿ. ಹುಷಾರ್ ಎಂದು ಹೇಳಿರುವುದು ಸರಿಯಲ್ಲ. ಇದೊಂದು ಕೋಮುವಾದಿ ಹೇಳಿಕೆಯಾಗಿದೆ. ಇಂತಹ ಬೆದರಿಕೆಗೆ ಹೆದರುವುದಿಲ್ಲ. ಅವರು ಶಿವಮೊಗ್ಗಕ್ಕೆ ಬಂದೇ ಬರುತ್ತಾರೆ. ಮುಂದಿನ ದಿನಗಳಲ್ಲಿ ನಾವು ನಮ್ಮ ವೇದಿಕೆಯಿಂದ ಸಮಾವೇಶ ಹಮ್ಮಿಕೊಳ್ಳುತ್ತಿದ್ದೇವೆ. ಅದರಲ್ಲೂ ಅವರು ಭಾಗವಹಿಸುತ್ತಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಮೊಹಮ್ಮದ್ ಗೌಸ್, ಇರ್ಫಾನ್, ಜವೀದ್, ಸುಭಾನ್ ಮುಂತಾದವರಿದ್ದರು.

Leave a Reply

Your email address will not be published. Required fields are marked *