ಭದ್ರಾವತಿ :- ಎಂಪಿಎಂ ಕಾರ್ಮಿಕರ ಗ್ರೂಪ್ ಸೂಪರ್ ಅನ್ಯೂಯೇಷನ್ ಸ್ಕೀಂನ ಆನ್ಯುಟಿ ಹಣವನ್ನು ಹೆಚ್ಚಿಸಲು ಆಗ್ರಹಿಸಿ ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆಯಿಂದ ಎಲ್‌ಐಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸ್ಥಳಿಯ ಎಲ್‌ಐಸಿ ಕಚೇರಿ ಮುಖ್ಯಸ್ಥರ ಮೂಲಕ ಮಂಗಳೂರು ಪಿ ಅಂಡ್ ಜಿಎಸ್ ಯುನಿಟ್ ಡಿವಿಜಿನಲ್ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿದರು.
ಸೂಪರ್ ಆನ್ಯುಯೇಷನ್ ಸ್ಕೀಂನ ಮಾಸ್ಟರ್ ಪಾಲಿಸಿ ನಂ.೫೦೮೨೧೧ ರ ಬಗ್ಗೆ ನಮಗೆ ನೀಡುತ್ತಿರುವ ಅನ್ಯುಟಿ ಹಣ ತುಂಬಾ ಕಡಿಮೆ ಇದ್ದು ಅದನ್ನು ಹೆಚ್ಚಿಸಲು ಹಾಗೂ ಒಟ್ಟು ಹಣವನ್ನು ರಾಷ್ಟ್ರೀಕೃತ ಬ್ಯಾಂಕ್ ಇಲ್ಲವೆ ಅಂಚೆ ಕಚೇರಿಯ ನಮ್ಮ ಖಾತೆಗಳಿಗೆ ವರ್ಗಾ ವಣೆ ಮಾಡುವಂತೆ ಕೋರಿ ಸಾಕಷ್ಟು ಬಾರಿ ಪತ್ರ ಬರೆದಿದ್ದೇವೆ. ಆದರೆ ಇದುವರೆಗೂ ನಮ್ಮ ಮನವಿಗೆ ಸ್ಪಂದನೆ ದೊರೆಯದಾಗಿದೆ ಎಂದು ದೂರಿದ್ದಾರೆ.
ಪಾಲಿಸಿದಾರ ಬದುಕಿರುವವರೆಗೂ ಹಣ ವಾಪಸ್ ಕೊಡುವುದಕ್ಕಾಗಲಿ, ಬಡ್ಡಿ ದರ ಹೆಚ್ಚಳ ಮಾಡುವುದಕ್ಕಾಗಲಿ ಬರುವುದಿಲ್ಲವೆಂದು ಇಲಾಖೆಯಿಂದ ಯಾವುದೆ ಸಹಿ ಇಲ್ಲದ ಬೋಗಸ್ ಪತ್ರ ನೀಡಲಾಗಿದೆ. ನಮ್ಮ ಹಣಕ್ಕೆ ಬಹಳ ಕಡಿಮೆ ಬಡ್ಡಿ ನೀಡುತ್ತಿದ್ದು ಇದರಿಂದ ಅನ್ಯಾಯವಾಗಿದೆ. ಈ ಕೂಡಲೆ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಹಾಗೂ ಕಾನೂನಿನ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದ್ದಾರೆ.
ಮನವಿ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಸಂಚಾಲಕ ಟಿ.ಜಿ. ಬಸವ ರಾಜಯ್ಯ, ಗೋವಿಂದಪ್ಪ, ಕೆ.ಜಿ. ವೆಂಕಟೇಶ ಮೂರ್ತಿ, ಶಿವಲಿಂಗಯ್ಯ, ಆರ್.ಎ. ಬಾಪು, ವಿ.ಎಸ್. ರಘುನಾಥ್, ತಿಮ್ಮಪ್ಪ, ಬಿ.ಎನ್. ರಾಜು ಸೇರಿದಂತೆ ಹಲವರಿದ್ದರು.