ಶಿವಮೊಗ್ಗ :- ಇಲ್ಲಿನ ನವುಲೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಶಾಲಾ ಮಕ್ಕಳೇ ಸ್ವಯಂ ಪ್ರೇರಿತರಾಗಿ ಹೊಂಡ ತಗ್ಗು ಮುಚ್ಚಿದ ಘಟನೆ ನಡೆದಿದೆ. ನವುಲೆಯ ಅರುಣೋದಯ ಶಾಲೆ ಎದುರು ಕೇವಲ 50-ಅಡಿ ಉದ್ದದ ಡಾಂಬರ್ ರಸ್ತೆ ಕಳೆದ 2-3 ವರ್ಷಗಳಿಂದಲೂ ಸಂಪೂರ್ಣ ಕಿತ್ತು ಹೋಗಿದ್ದು ಬರೇ ಹೊಂಡ ತಗ್ಗುಗಳಿಂದಲೇ ತುಂಬಿಕೊಂಡಿದೆ. ರಸ್ತೆ ಎಲ್ಲಿದೆ ಅಂತ ಹುಡುಕಬೇಕಾದ ದುಸ್ಥಿತಿ ಸ್ಥಳೀಯರದ್ದಾಗಿದೆ. ಕಳೆದ ವರ್ಷವೂ ಆ ರಸ್ತೆಯಲ್ಲಿದ್ದ ಹೊಂಡ ತಗ್ಗುಗಳನ್ನು ಶಾಲೆಯವರೇ ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದರು.
ನವುಲೆ ರಸ್ತೆಯಲ್ಲಿರುವ ಇಂದಿರಾ ಗಾಂಧಿ ಬಡಾವಣೆಯಿಂದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವರೆಗಿನ ಈ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ಮಹಾನಗರ ಪಾಲಿಕೆಯ ಆಯುಕ್ತರಿಗೆ, ಜನಪ್ರತಿನಿಧಿಗಳಿಗೆ ಸ್ಥಳೀಯ ಸಂಘ, ಸಂಸ್ಥೆಗಳು ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಈ ಶಾಲೆ ಎದುರಿನ ರಸ್ತೆಯಲ್ಲಿರುವ ಹೊಂಡ ತಗ್ಗುಗಳಲ್ಲಿ 3ರಿಂದ 4ಮಕ್ಕಳು ಎಡವಿ ಬಿದ್ದು ಮೈಕೈಗೆ ಗಾಯ ಮಾಡಿಕೊಂಡಿದ್ದರಿಂದ ಈ ತೊಂದರೆ ಬೇರೆಯವರಿಗೆ ಆಗಬಾರದು ಎಂದು ಯೋಚಿಸಿ ಇಂದು ಮಕ್ಕಳೇ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನಾದರೂ ಮಹಾನಗರ ಪಾಲಿಕೆ ನವುಲೆ ರಸ್ತೆ ದುರಸ್ಥಿಗೆ ಮುಂದಾಗುವುದೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.