
ಶಿವಮೊಗ್ಗ :- ಭವಿಷ್ಯದಲ್ಲಿ ರೈತರಿಗೆ ರಬ್ಬರ್ ಮತ್ತು ತಾಳೆ ಬೆಳೆಗಳು ಹೆಚ್ಚು ಲಾಭದಾಯಕವಾಗಿದ್ದು, ಈ ಬೆಳೆಗಳನ್ನು ಬೆಳೆಯುವುದಕ್ಕೆ ರೈತರು ಮುಂದಾಗಬೇಕು, ಆ ಮೂಲಕ ಆರ್ಥಿಕ ಪ್ರಗತಿ ಕಂಡುಕೊಳ್ಳಬೇಕು ಎಂದು ಪ್ರಗತಿ ಪರ ಕೃಷಿಕ ಹಾಗೂ ರಾಜ್ಯ ತೋಟಗಾರಿಕೆ ಬೆಳೆ ದರ ನಿಗದಿ ಸಮಿತಿ ಮಾಜಿ ಸದಸ್ಯ ಟಿ.ಎಂ.ವೀರಪ್ಪ ನಾಯಕ ಹೇಳಿದರು.
ರೈತ ದಸರಾ ಅಚರಣೆಯ ಅಂಗವಾಗಿ ಇಂದು ಮಹಾನಗರ ಪಾಲಿಕೆಯು ವಿವಿಧ ರೈತ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ಕುವೆಂಪು ರಂಗಮAದಿರದಲ್ಲಿ ಆಯೋಜಿಸಿದ್ದ ರೈತ ದಸರಾ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೊರಬ ತಾಲೂಕು ಚಂದ್ರಗುತ್ತಿ ಹೋಬಳಿ ಹೊರಬೈಲು ನಿವಾಸಿಯಾದ ತಾವು, ಅಲ್ಲಿರುವ 24 ಎಕರೆ ಭೂಮಿಯಲ್ಲಿ ರಬ್ಬರ್, ತಾಳೆ, ಅಡಿಕೆ, ತೆಂಗು, ಏಲಕ್ಕಿ, ಭತ್ತ ಸೇರಿದಂತೆ ಬಹು ಬೆಳೆಯ ಕೃಷಿ ಮಾಡಿದ್ದರ ಬಗ್ಗೆ ವಿವರಿಸಿದರು.

ನಮ್ಮ ಭಾಗದಲ್ಲಿ ರೈತರು ದೀರ್ಘಾವಧಿ ಬೆಳೆಗಳನ್ನು ಬೆಳೆಯಲು ಮುಂದಾದರೂ ಬೆಲೆ ಸಿಗದ ಕಾರಣಕ್ಕೆ ಅರ್ಧದಲ್ಲಿಯೇ ಮೊಟುಕುಗೊಳಿದ್ದಾರೆ. ಆದರೆ ನಾನು ಹಾಗೆ ಮಾಡಿಲ್ಲ. ಬಹು ಬೆಳೆಗಳಲ್ಲಿ ಈಗ ಅಡಿಕೆ ಹಾಳಾಗಿದೆ. ಆದರೆ ರಬ್ಬರ್, ತಾಳೆ ಹೆಚ್ಚು ಲಾಭದಾಯಕವಾಗಿದೆ. ರಬ್ಬರ್ ಈಗ 300 ಗಿಡಗಳಿವೆ. ಅದರಿಂದ ಪ್ರತಿ ತಿಂಗಳು 60 ಸಾವಿರ ಆದಾಯ ಸಿಗುತ್ತಿದೆ. ತಾಳೆಯಿಂದಲೂ ಲಾಭವಿದೆ ಎಂದರು.
ನಮ್ಮ ರಾಜ್ಯಕ್ಕೆ ಈಗ ರಬ್ಬರ್ ಮತ್ತು ತಾಳೆ ಆಮದು ಆಗುತ್ತಿದೆ. ಅದಕ್ಕೆ ಕಾರಣ ಬಹುಬೇಡಿಕೆ. ಇದಕ್ಕೆ ಅನುಗುಣವಾಗಿ ಇಲ್ಲಿಯೇ ರೈತರು ರಬ್ಬರ್ ಮತ್ತು ತಾಳೆ ಬೆಳೆಯಲು ಶುರು ಮಾಡಿದರೆ ಭವಿಷ್ಯದಲ್ಲಿ ಹೆಚ್ಚು ಲಾಭ ಪಡೆಯಲು ಸಾಧ್ಯ ಎಂದರು.
ರೈತ ನಾಯಕ ಕೆ.ಟಿ.ಗಂಗಾಧರ್ ಮಾತನಾಡಿ, ಭಾರತದ ಭೂಮಿ, ಆಹಾರ, ಕೃಷಿ ಜ್ಞಾನದ ನಿಯಂತ್ರಣದ ಕೆಲಸಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಕೈ ಹಾಕಿವೆ. ನಮ್ಮ ದೇಶವನ್ನು ಬಂಡವಾಳ ಮಾಡಿಕೊಂಡಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಭಾರತದ ಕೃಷಿ ಸಂಸ್ಕೃತಿ ನಾಶವಾಗಿ ರೈತ ಸಂಪೂರ್ಣ ನಾಶವಾಗುತ್ತಾನೆ ಎಂದು ಆತಂಕ ವ್ಯಕ್ತಪಡಿಸಿದರು.
ಆಗ್ರಿಕಲ್ಚರ್ ಅಂದ್ರೆ ಭಾರತೀಯ ಸಂಸ್ಕೃತಿಯೇ ಆಗಿದೆ. ನಮ್ಮ ಮುಂದಿನ ಪೀಳಿಗೆಗೆ ಇದರ ಬಗ್ಗೆ ಅರಿವು ಮೂಡಿಸಬೇಕು. ನಾವು ಹೆಚ್ವಿನ ಪ್ರಮಾಣ ಆಹಾರ ಉತ್ಪಾದನೆ ಮಾಡಿದ್ದೇವೆ. ಆದರೆ ನಮ್ಮ ಮಣ್ಞಿನ, ನೀರಿನ ಮತ್ತು ಬೀಜದ ಆರೋಗ್ಯವನ್ನು ಹಾಳು ಮಾಡಿದ್ದೇವೆ. ಅದನ್ನು ರೈತರೇ ಸರಿ ಮಾಡಬೇಕು. ಇನ್ನು ಮುಂದೆ ಗುಣಮಟ್ಟದ ಆಹಾರ ಬೆಳೆಯಬೇಕು. ಭಾರತೀಯ ಸಂಸ್ಕೃತಿ ಎಂದರೆ ಅದು ಕೃಷಿ ಸಂಸ್ಕೃತಿ. ಅದರ ನೆಲೆಗಳು ಹಳ್ಳಿಯಲ್ಲಿ ಮಾತ್ರ ಉಳಿದಿದೆ ಎಂದರು.
ವೇದಿಕೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸದ್ದರು. ಪ್ರಗತಿಪರ ರೈತ ಮಹಿಳೆ ಕಮ್ಮಲಮ್ಮ ಟೀಕಪ್ಪ, ಕೃಷಿ ವಿವಿ ಕುಲಪತಿ ಡಾ. ಸಿ.ಜಗದೀಶ್, ರೈತ ನಾಯಕ ಹೆಚ್. ಆರ್. ಬಸವರಾಜಪ್ಪ, ಕೃಷಿ ಇಲಾಖೆ ಮಂಜುಳಾ, ಪ್ರಮುಖರಾದ ಹೆಚ್.ಎನ್. ನಾಗರಾಜ್, ಈ.ವಿಶ್ವಾಸ್, ಡಾ.ನಾಗರಾಜ್, ರುದ್ರೇಗೌಡ, ಧೀರರಾಜ್ ಹೊನ್ನವಿಲೆ, ಮಂಜುನಾಥ್ ಬಾಬು, ಸಿದ್ದಪ್ಪ , ಮುಜಿಬ್ ಇದ್ದರು. ಪಾಲಿಕೆ ನೌಕರರ ಸಂಘದ ಗೋವಿಂದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಆಯುಕ್ತ ನಾಗೇಂದ್ರ ಕಾರ್ಯಕ್ರಮ ನಿರೂಪಿಸಿದರು. ರೈತ ದಸರಾ ಕಾರ್ಯಕ್ರಮ ಕಾರ್ಯದರ್ಶಿ ವಿಕಾಸ್ ಇದ್ದರು.
