google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಅನ್ಯ ಸಮುದಾಯದವರು ಎಸ್‌ಟಿ ಪಟ್ಟಿಗೆ ಸೇರಿಸುತ್ತಿರುವುದನ್ನು ವಿರೋಧಿಸಿ ಶಿವಮೊಗ್ಗ ಜಿಲ್ಲಾ ನಾಯಕ ವಾಲ್ಮೀಕಿ ಸಂಘದ ನೇತೃತ್ವದಲ್ಲಿ ಸಮಾಜದ ಮುಖಂಡರು ಇಂದು ಮೆರವಣಿಗೆಯಲ್ಲಿ ಬಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. 

ಹಿಂದುಳಿದ ವರ್ಗಗಳ ಪ್ರವರ್ಗ ಒಂದರಲ್ಲಿರುವ ಬೆಸ್ತ, ಅಂಬಿಗಾ, ಕಬ್ಬಲಿಗ, ಕೋಲಿ ಮುಂತಾದ ಜಾತಿಯವರಿಗೆ ನಾಯಕ ತಳವಾರರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ ಇದನ್ನು ಕೂಡಲೇ ನಿಲ್ಲಿಸಬೇಕು ಮತ್ತು ಅಂತಹ ಜಾತಿ ಪ್ರಮಾಣ ಪತ್ರಗಳನ್ನು ನೀಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್.ಹನುಮಂತಪ್ಪ ತಳವಾರ ಜಾತಿಗೆ ಸೇರದೆ ಇದ್ದರೂ ಕೂಡ ಕೇವಲ ತಳವಾರಕೆ ವೃತ್ತಿ ಮಾಡುತ್ತಿದ್ದರೂ ಎಂಬ ಕಾರಣಕ್ಕೆ ಇತರೆ ಜಾತಿಯವರು ಪರಿಶಿಷ್ಟ ವರ್ಗದ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರವನ್ನು ತೆಗೆದುಕೊಂಡು ನಮ್ಮನ್ನು ವಂಚಿಸಲಾಗುತ್ತಿದೆ. ಇದು ತಕ್ಷಣವೇ ನಿಲ್ಲಬೇಕು. ಸರ್ಕಾರ ಈ ಕೂಡಲೇ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಕುರುಬ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತಾರೆ. ನಾವು ಹೇಗೋ ಹೋರಾಟ ಮಾಡಿ ನಮ್ಮ ಮೀಸಲಾತಿಯನ್ನು ಶೇ.7.5ರಷ್ಟು ಪಡೆಯುತ್ತಿದ್ದೆವು. ಈಗ ಕುರುಬರು ನಮ್ಮ ಪರಿಶಿಷ್ಟವರ್ಗದ ಪಟ್ಟಿಗೆ ಬಂದರೆ ನಮ್ಮ ಸಮುದಾಯಕ್ಕೆ ಬಹಳ ದೊಡ್ಡ ಅನ್ಯಾಯವಾಗುತ್ತದೆ ಎಂದರು.

ನಾಯಕ ವಾಲ್ಮೀಕಿ ಸಮಾಜದವರಿಗೆ ತನ್ನದೇ ಆದ ಇತಿಹಾಸವಿದೆ. ಆದರೆ ನಮ್ಮ ಸಮಾಜದ ಮೀಸಲಾತಿಯನ್ನು ಬೇರೆಯವರು ಕಬಳಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಸಮಾಜವನ್ನು ಕಡೆಗಾಣಿಸುತ್ತಿದ್ದಾರೆ. ತಳವಾರರ ಹೆಸರಿನಲ್ಲಿ ಇತರೆ ಸಮುದಾಯದವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕು ಪ್ರತಿಭಟನಕಾರರು ತಿಳಿಸಿದರು.

ಈಗಾಗಲೇ ಗುರುತ್ತಿಸಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಬೇಕು. ವಾಲ್ಮೀಕಿ ಜನಾಂಗದ ನಿರಂತರ ದೌರ್ಜನ್ಯ ಹೆಚ್ಚಾಗುತ್ತಿದ್ದು ಅದನ್ನು ತಡೆಯಬೇಕು. ಗಿರಿಜನ ಉಪಯೋಜನೆಯಡಿಯಲ್ಲಿರುವ ಅನುದಾನವನ್ನು ಇತರೆ ಉದ್ದೇಶಕ್ಕೆ ಬಳಸಬಾರದು. ಮತ್ತು ಇತ್ತೀಚೆಗೆ ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಅನೇಕ ಜಾತಿಗಳು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿವೆ. ಈ ಒತ್ತಡಕ್ಕೆ ಸರ್ಕಾರ ಮಣಿಯಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಹಾಗೂ ನಾಯಕ ವಾಲ್ಮೀಕಿ ವಿವಿಧ ಸಂಘಗಳ ಮುಖಂಡರುಗಳಾದ ಬಿ.ಎಸ್.ನಾಗರಾಜ್, ಹರೀಶ್, ಡಿಬಿಹಳ್ಳಿ ಬಸವರಾಜಪ್ಪ, ಶೇಖರಪ್ಪ, ಸುರೇಶ್, ಲಕ್ಷö್ಮಣಪ್ಪ, ನಿಜಲಿಂಗಪ್ಪ, ರಂಗಪ್ಪ, ಹನುಮಂತಪ್ಪ, ಗೋಪಿ, ದುರ್ಗಪ್ಪ, ಮಲ್ಲೇಶ್ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *