
ಶಿವಮೊಗ್ಗ: ಕೇಂದ್ರ ಸರ್ಕಾರವು ಜಿಎಸ್‌ಟಿ 2.0ನಲ್ಲಿ ಐತಿಹಾಸಿಕ ಸುಧಾರಣೆಗಳನ್ನು ತಂದಿದ್ದು, ಎಲ್ಲ ವರ್ಗದ ಜನರಿಗೂ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ದೇಶಾದ್ಯಂತ ಜಿಎಸ್‌ಟಿ 2.0 ಸುಧಾರಣೆ ಜರಿ ಹಿನ್ನೆಲೆಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಎಸ್‌ಟಿ ತೆರಿಗೆ ಬದಲಾವಣೆಯಿಂದ ಎಲ್ಲ ವರ್ಗದ ಜನರು ಲಾಭ ಪಡೆದುಕೊಳ್ಳಲಿದ್ದಾರೆ. ಈ ನಿರ್ಧಾರವನ್ನು ಜರಿಗೆ ತಂದ ಜಿಎಸ್‌ಟಿ ಕೌನ್ಸಿಲ್, ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಜಿಎಸ್‌ಟಿ ಸುಧಾರಣೆಗಳು ದೇಶದ ಆರ್ಥಿಕತೆಯನ್ನು ಹೆಚ್ಚಿಸುತ್ತವೆ. ಸರಳ, ಪಾರದರ್ಶಕ ಹಾಗೂ ಜನಪರಗೊಳಿಸುವತ್ತ ದೊಡ್ಡ ಹೆಜ್ಜೆಯಾಗಿದೆ. ಶೇ. 5 ಮತ್ತು ಶೇ. 18 ಎರಡು ಸ್ಲ್ಯಾಬ್‌ಗಳು ಜರಿಯಾಗಲಿವೆ. ಐಷರಾಮಿ ವಸ್ತುಗಳಿಗೆ ಮಾತ್ರ ವಿಶೇಷ ಹೆಚ್ಚುವರಿ ದರಗಳು ಉಳಿಯುತ್ತವೆ ಎಂದು ಹೇಳಿದರು.
ದಿನನಿತ್ಯದ ಅಗತ್ಯ ವಸ್ತುಗಳು, ಆಹಾರ ಧಾನ್ಯಗಳು, ಔಷಧಿ ಮತ್ತು ಕೃಷಿ ಸಾಧನಗಳ ಮೇಲಿನ ತೆರಿಗೆ ಕಡಿಯವಾಗಿದೆ. ಇದರಿಂದ ಬಡವರು, ಮಧ್ಯಮ ವರ್ಗ ಮತ್ತು ರೈತರಿಗೆ ನೇರವಾದ ಲಾಭ ಸಿಗುತ್ತದೆ. ಕಟ್ಟಡ ಮತ್ತು ವಸತಿ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ವ್ಯಾಪಾರ ಮತ್ತು ಉದ್ಯಮಗಳಿಗೆ ಅನುಕೂಲ, ಎಂಎಸ್‌ಎಂಇ ಮತ್ತು ಸಣ್ಣ ವ್ಯಾಪಾರಿಗಳಿಗೆ ಸುಲಭ ನೋಂದಣಿ ಹಾಗೂ ದೇಶದ ಜನರ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್.ಸುಕುಮಾರ್, ಖಜಂಚಿ ಆರ್.ಮನೋಹರ, ನಿರ್ದೇಶಕರಾದ ವಿನೋದ್ ಕುಮಾರ್ ಜೈನ್, ವಿನೋದ್ ಕುಮಾರ್.ಕೆ.ಜಿ., ಪ್ರದೀಪ್ ವಿ.ಎಲಿ, ಎಸ್.ಪಿ.ಶಂಕರ್, ಸಂಯೋಜಿತ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಾಣಿಜ್ಯೋದ್ಯಮಿಗಳು, ಮಹಿಳಾ ಉದ್ಯಮಿಗಳು, ಸೇವಾ ವಲಯ, ವೃತ್ತಿಪರರು ಹಾಗೂ ಕೈಗೊದ್ಯಮಿಗಳು ಹಾಜರಿದ್ದರು.