
ಶಿವಮೊಗ್ಗ :- ಬಡವರ ಕೈಯಲ್ಲಿ ಹಣ ಬಂದಾಗ ಮಾತ್ರ ದೇಶದ ಪ್ರಗತಿಯಾಗಲಿದ್ದು, ಬಡವರಿಗಾಗಿ ರೂಪಿಸಿರುವ ಯೋಜನೆಗಳನ್ನು ಅವರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ಕರೆ ನೀಡಿದರು
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ಸೋಮವಾರ ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯ ಭವನ ಲೋಕಾರ್ಪಣೆ ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವಪೂರ್ಣವಾದ ಬಿಲ್‌ಗಳನ್ನು ಪಾಸ್ ಮಾಡಿದೆ. ಅಮೇಜನ್, ಸ್ವಿಗ್ಗಿ, ಝೆಮ್ಯಾಟೊ ಬ್ಲಿಂಕ್‌ಇಟ್‌ಗಳಲ್ಲಿ ಕೆಲಸ ಮಾಡುವ 5 ಲಕ್ಷಕ್ಕೂ ಹೆಚ್ಚು ಗಿಗ್ ಕಾರ್ಮಿಕರು ರಾಜ್ಯದಲ್ಲಿ ಇದ್ದಾರೆ. ಅವರಿಗಾಗಿಯೇ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಸಮರ್ಪಕವಾದ ಗಿಗ್ ಬಿಲ್ ಪಾಸ್ ಆಗಿದೆ. ಸಾಗಾಣಿಕೆ ದರದ ಮೇಲೆ ೧ ರಿಂದ ೫% ಹಣ ಮತ್ತು ಸರ್ಕಾರ ನೀಡುವ ಹಣದಿಂದ ಅವರಿಗೆ ಅನುಕೂಲ ಮಾಡಲಾಗುತ್ತಿದೆ ಎಂದರು.
20 ಜನರಿಗಿಂತ ಹೆಚ್ಚು ಕಾರ್ಮಿಕರು ಕೆಲಸ ಮಾಡುವೆಡೆ ಮಾಲೀಕರು 5 ವರ್ಷ ಕೆಲಸ ಮಾಡಿದ ಕಾರ್ಮಿಕರಿಗೆ ಕಡ್ಡಾಯವಾಗಿ ಗ್ರಾಚುಟಿ ಪಾವತಿಸಬೇಕು. ಈ ರೀತಿಯ 6 ಸಾವಿರ ಕಂಪೆನಿಗಳು ಇಲಾಖೆಯಡಿ ನೋಂದಣಿಯಾಗಿದ್ದು, ಅಧಿಕಾರಿಗಳು ಗ್ರಾಚುಟಿ ಪಾವತಿ ಬಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಿದರು.
ಎಸ್‌ಸಿ/ ಎಸ್‌ಟಿ ಯವರಿಗೆ ಕೆಲಸ ನೀಡುವ ಖಾಸಗಿ ಸಂಸ್ಥೆ/ಕಂಪೆನಿಗೆ ಕಾರ್ಮಿಕ ಇಲಾಖೆಯಿಂದ ಅವರಿಗೆ ಪಾವತಿಸಲು ಶೇ. 50 ಹಣ ನೀಡುವ ದೇಶದಲ್ಲೇ ಪ್ರಪ್ರಥಮ ಯೋಜನೆ ‘ಆಶಾದೀಪ’ ಕಾರ್ಮಿಕರ ಪಾಲಿಗೆ ಆಶಾದೀಪವಾಗಿದೆ. ಇದೇ ಮೊದಲ ಬಾರಿಗೆ ಇಲಾಖೆಯು 91 ಸಣ್ಣ ಸಣ್ಣ ಕೆಲಸ ಮಾಡುವ ಸಮುದಾಯಗಳನ್ನು ಗುರುತಿಸಿ ಸ್ಮಾರ್ಟ್ ಕಾರ್ಡ್ ನೀಡುತ್ತಿದೆ. ಅಸಂಘಟಿತ ವರ್ಗದ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಡೀಸೆಲ್, ಪೆಟ್ರೋಲ್ ನಿಂದ 50 ಪೈಸಾ ದಿಂದ 1 ರೂ. ಸೆಸ್ ನೀಡಿದಲ್ಲಿ ಅನುಕೂಲವಾಗುತ್ತದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಾರ್ಮಿಕರು ದೇಶದ ಆಸ್ತಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ತಲುಪಿಸುತ್ತಿದೆ. ವಲಸೆ ಕಾರ್ಮಿಕರಿಗೆ ಅನುಕೂಲವಾಗಲೆಂದು ಸಿದ್ಲಿಪುರದಲ್ಲಿ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳು ಹಾಗೂ ಸಮುದಾಯ ಭವನ ಲೋಕಾರ್ಪಣೆ ಮಾಡುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ, ಕಾರ್ಮಿಕ ಇಲಾಖೆ ಜಂಟಿ ನಿರ್ದೇಶP ಡಾ.ಎಸ್.ಬಿ. ರವಿಕುಮಾರ್ ಸ್ಮಾರ್ಟ್ ಕಾರ್ಡ್ ಚೆಕ್ ವಿತರಿಸಿದರು. ಶಾಸಕರಾದ ಶಾರದಾ ಪೂರ್ಯಾನಾಯ್ಕ, ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಪರಿಶಿಷ್ಟ ಜತಿ ಪರಿಶಿಷ್ಟ ವರ್ಗ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ಸೂಡಾ ಅಧ್ಯಕ್ಷ ಸುಂದರೇಶ್, ಕಾರ್ಮಿಕ ಆಯುಕ್ತ ಡಾ.ಗೋಪಾಲಕೃಷ್ಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿಗಳಾದ ಭಾರತಿ, ಜಿ.ಪಂ.ಸಿಇಒ ಹೇಮಂತ್ ಇನ್ನಿತರರಿದ್ದರು.
