
ಶಿವಮೊಗ್ಗ :- ಇಂದಿನ ತಂತ್ರಜನ ಯುಗವಾಗದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದ್ದು, ಅವರ ಮೇಲೆ ಹೆಚ್ಚಿನ ಗಮನ ಇಡಬೇಕಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸಲಹೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊಬೈಲ್ ಹಾಗೂ ಕಂಫ್ಯೂಟರ್ ಬಳಕೆಯಿಂದ ಇಂದು ಯುವಕರ ಕಣ್ಣು, ಕಿವಿ ಬೇಗ ಹಾಳಾಗುತ್ತಿವೆ ಎಂಬುದು ಆತಂಕದ ಸಂಗತಿ. ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಡಿಪೋ ಬರುವ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಉದ್ಘಾಟನೆಯಾಗಲಿದೆ. ಅದು ಆದರೆ ಇನ್ನಷ್ಟು ಅಭಿವೃದ್ಧಿಗೆ ಸಹಾಯವಾಗಲಿದೆ ಎಂದ ಅವರು ಸರ್ಕಾರಿ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್. ಷಡಾಕ್ಷರಿಯವರು ದೇಶದಲ್ಲಿಯೇ ನೌಕರರ ಸಂಘದ ಸಂಘದ ಅತ್ಯುತ್ತಮ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಹಿರಿಯ ಪತ್ರಕರ್ತ ರಂಗನಾಥ ಭಾರದ್ವಾಜ್ ಪ್ರೇರಣಾದಾಯಕ ಮಾತುಗಳನ್ನಾಗಿ, ಇಂದು ಯಾವುದೂ ಕೂಡ ಸುಮ್ಮನೆ ಸಿಕ್ಕುವುದಿಲ್ಲ. ಅದಕ್ಕಾಗಿ ಹೋರಾಟ ಮಾಡಲೇಬೇಕು. ಸ್ಪರ್ಧೆ ಇದ್ದೇ ಇದೆ. ಅದಕ್ಕೆ ಮಕ್ಕಳು ತಯಾರಾಗಬೇಕು. ಸ್ಪರ್ಧೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉತ್ತೀರ್ಣ ಅಂಕಗಳನ್ನು ಕಡಿಮೆ ಮಾಡಬಾರದೆಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜಧ್ಯಕ್ಷ ಸಿ.ಎಸ್. ಷಡಾಕ್ಷರಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು ಒತ್ತಡ, ವ್ಯಾಮೋಹಗಳಿಗೆ ಒಳಗಾಗದೆ ಓದಿನಕಡೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಓದುವ ಸಮಯದಲ್ಲಿ ಸರಿಯಾಗಿ ಓದದಿದ್ದರೆ ಬದುಕು ಟಿಶ್ಯೂ ಪೇಪರ್‌ನಂತಾಗುತ್ತದೆ ಎಂದ ಅವರು ನೌಕರರ ಮೇಲೆ ಒತ್ತಡ ಇದ್ದರೂ ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಶೇ.೪೦ ರಷ್ಟು ಹುದ್ದೆಗಳು ಖಾಲಿ ಇದ್ದರೂ ಕೂಡ ಟ್ಯಾಕ್ಸ್ ಸಂಗ್ರಹದಲ್ಲಿ ರಾಜ್ಯ ದೇಶದಲ್ಲೇ ೨ ನೇ ಸ್ಥಾನದಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಪುರಸ್ಕರಿಸಲಾಯಿತು. ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ರಾಜ್ಯ ಸಂಘದ ಗಿರಿಗೌಡ, ಬಸವರಾಜ್ ಮೊದಲಾದವರು ಇದ್ದರು.