
ಶಿವಮೊಗ್ಗ :- ಅಂಧತ್ವದ ಆಧುನಿಕತೆಯ ಭರಾಟೆಗೆ ಸಿಲುಕಿ ಹದಿಹರೆಯದ ಮನಸ್ಸು ಸಂಪೂರ್ಣ ಕಲುಷಿತಗೊಳ್ಳುತ್ತಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನ ವತಿಯಿಂದ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾಲೇಜಿನ ವಿದ್ಯಾರ್ಥಿನಿ ಸಂಘ, ಕ್ರೀಡಾ ವೇದಿಕೆ, ಎನ್.ಎಸ್.ಎಸ್ ಘಟಕಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ರಂಗದಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳದವರು, ಇನ್ನೊಬ್ಬರಿಗೆ ಎಂದಿಗೂ ಕಲಿಸಲಾರರು. ಭವಿಷ್ಯದ ಜನಾಂಗವನ್ನು ಮುನ್ನಡೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ತಂದೆಯ ಪಾದ ಸ್ಪರ್ಶ ಮಾಡಿದವನಿಗೆ ಸಂಪತ್ತಿನ ಬರವಿಲ್ಲ, ತಾಯಿಯ ಪಾದ ಸ್ಪರ್ಶ ಮಾಡಿದವನಿಗೆ ಮಮತೆಯ ಕೊರತೆಯಿಲ್ಲ, ಅಣ್ಣನ ಆಶಿರ್ವಾದದಿಂದ ಶಕ್ತಿಯ ಕೊರತೆಯಿಲ್ಲ, ಅದೇ ರೀತಿ ಗುರುವಿನ ಪಾದ ಸ್ಪರ್ಶ ಮಾಡಿದಾತ ಎಂದಿಗೂ ವಿದ್ಯಾಹೀನನಾಗುವುದಿಲ್ಲ.
ವಿವೇಚನೆ ಇಲ್ಲದ ವಯಸ್ಸಿನಲ್ಲಿ, ಮೊಬೈಲ್ ಯುವ ಮನಸ್ಸನ್ನು ಹಾದಿ ತಪ್ಪಿಸುತ್ತಿದೆ. ಕುಟುಂಬ ಪದ್ದತಿಯಿಂದ ವಿಮುಕರಾಗಿದ್ದೇವೆ. ವಿಫುಲ ಅವಕಾಶಗಳನ್ನು ಬೆನ್ನತ್ತಿ ಹೋಗುವಾಗ ಸೌಜನ್ಯತೆ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ತುಂಬು ಕುಟುಂಬದ ಜೀವನ ಎಂಬ ಕಲ್ಪನೆಯಿಂದ ಹೊರಬಂದು, ಗಂಡ ಹೆಂಡತಿ ಹೊಂದಾಣಿಕೆಯೆ ಕುಟುಂಬ ಎಂಬ ದುಸ್ಥಿತಿಗೆ ಇಂದಿನ ಸಮಾಜ ಬಂದಿದೆ.
ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ಭ್ರಷ್ಟನಾಗುವುದಿಲ್ಲ. ಮಕ್ಕಳನ್ನು ಸರಿ ದಾರಿಗೆ ತರುವ ಪ್ರಯತ್ನದಲ್ಲಿ ತಾಯಿಯ ಪಾತ್ರ ದೊಡ್ಡದು. ಎಂತಹ ಸವಾಲುಗಳನ್ನು ಎದುರಿಸುವ ಶಕ್ತಿ ಮಹಿಳೆಯರು ಹೊಂದಿದ್ದಾರೆ. ಸಂಸ್ಕಾರಕ್ಕೆ ಮತ್ತೊಂದು ಹೆಸರೆ ಸ್ತ್ರೀ ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸತತ ಅಭ್ಯಾಸದಿಂದ ಮಾತ್ರ ಯಾವುದೇ ವಿಷಯದಲ್ಲಿ ವಿದ್ವತ್ ಪಡೆಯಲು ಸಾಧ್ಯ. ಕಂಠಪಾಠದ ಕಲಿಕೆಗಿಂತ, ವಿಷಯಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ವಿದ್ಯಾರ್ಥಿ ಸಂಘಗಳು ನಮ್ಮಲ್ಲಿ ಸಹಬಾಳ್ವೆಯ ಮಹತ್ವ ತಿಳಿಸುತ್ತದೆ. ಜೀವನಕ್ಕೆ ಬೇಕಾದ ಎಲ್ಲಾ ಕೌಶಲ್ಯತೆಗಳನ್ನು ಕಾಲೇಜಿನ ವೇದಿಕೆಗಳು, ಅನುಭವದ ಆಧಾರದಲ್ಲಿ ಕಲಿಸುತ್ತದೆ. ಶ್ರದ್ಧೆ ಸಾಧನೆಯ ಶ್ರೇಷ್ಟವಾದ ದಾರಿ ಎಂದು ಹೇಳಿದರು.
ಸುಬ್ಬಯ್ಯ ಸಮೂಹ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಡಾ||ವಿನಯ ಶ್ರೀನಿವಾಸ ಮಾತನಾಡಿ, ನಮ್ಮ ಸಮಗ್ರ ಜೀವನಕ್ಕೆ ವಿದ್ಯಾರ್ಥಿ ಜೀವನ ಅವಲಂಬಿತವಾಗಿದೆ. ಪರಿಶ್ರಮದ ಜೊತೆಗೆ ಚಾಕಚಕ್ಯತೆ ರೂಡಿಸಿಕೊಳ್ಳಿ. ಪ್ರಾಮಾಣಿಕತೆ ಮತ್ತು ಜ್ಞಾನ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಸ್.ಆರ್.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ, ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಅನನ್ಯ, ಕಾರ್ಯದರ್ಶಿ ನಂದಿತ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.