
ಬೆಂಗಳೂರು :- ರಾಜ್ಯದ ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್), ಬೆಂಗಳೂರು ಪಬ್ಲಿಕ್ ಶಾಲೆಗಳು (ಬಿಪಿಎಸ್) ಮತ್ತು ಪಿ.ಎಂ. ಶ್ರೀ ಶಾಲೆಗಳಲ್ಲಿ ದ್ವಿ-ಭಾಷಾ ಮಾಧ್ಯಮದ ತರಗತಿಗಳಿಗೆ ಮಕ್ಕಳ ಗರಿಷ್ಠ ದಾಖಲಾತಿ ಮಿತಿ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳ ದಾಖಲಾತಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ ಈ ಕ್ರಮ ಕೈಗೊಂಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ತಿಳಿಸಿದ್ದಾರೆ.
೨೦೨೫ರ ಜೂನ್ ೧೯ರಂದು ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಶೈಕ್ಷಣಿಕ ವರ್ಷ ೨೦೨೫-೨೬ರಿಂದ ಜಾರಿಗೆ ಬರುವಂತೆ, ಪೂರ್ವ ಪ್ರಾಥಮಿಕ ವಿಭಾಗದಲ್ಲಿ (ಎಲ್‌ಕೆಜಿ ಮತ್ತು ಯುಕೆಜಿ) ಪ್ರತಿ ತರಗತಿಗೆ ಗರಿಷ್ಠ ೪೦ ಮಕ್ಕಳು, ಪ್ರಾಥಮಿಕ ಶಾಲೆಗಳಲ್ಲಿ (೧ ರಿಂದ ೭ನೇ ತರಗತಿ) ಗರಿಷ್ಠ ೫೦ ಹಾಗೂ ಪ್ರೌಢ ಶಾಲೆಗಳಲ್ಲಿ (೮ ರಿಂದ ೧೦ನೇ ತರಗತಿ) ಗರಿಷ್ಠ ೫೦ ವಿದ್ಯಾರ್ಥಿಗಳನ್ನು ದಾಖಲಿಸಲು ಅನುಮತಿಸಲಾಗಿದೆ ಎಂದಿದ್ದಾರೆ.
ಗುಣಮಟ್ಟದ ಶಿಕ್ಷಣ:
ರಾಜ್ಯದಲ್ಲಿ ೨೦೧೭-೧೮ನೇ ಸಾಲಿನಿಂದ ಹಂತ ಹಂತವಾಗಿ ೩೦೮ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಹಾಗೂ ಕನ್ನಡ/ಇತರ ಮಾಧ್ಯಮದ ತರಗತಿಗಳೊಂದಿಗೆ ಒಂದನೇ ತರಗತಿಯಿಂದ ದ್ವಿ-ಭಾಷಾ ಮಾಧ್ಯಮ ತರಗತಿಗಳನ್ನು ಸಹ ಪ್ರಾರಂಭಿಸಲಾಗಿದೆ. ಕೇಂದ್ರಿಯ ವಿದ್ಯಾಲಯ ಮತ್ತು ನವೋದಯ ಶಾಲೆಗಳು ಹೆಚ್ಚು ಮಕ್ಕಳನ್ನು ದಾಖಲಿಸಿಕೊಂಡು ಯಶಸ್ಸು ಸಾಧಿಸಿರುವ ಕುರಿತು ಉಲ್ಲೇಖಿಸಿರುವ ರಾಜ್ಯ ಸರ್ಕಾರ, ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಠವಾಗಿ ಬಳಸಿಕೊಂಡು ಹೆಚ್ಚಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಸಂವಿಧಾನಾತ್ಮಕ ಜವಾಬ್ದಾರಿ ಎಂದು ತಿಳಿಸಿದೆ.