google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಸದನದ ಕಾರ್ಯಕಲಾಪಗಳಿಗೆ ಅಡ್ಡಿಮಾಡಿದ ಬಿಜೆಪಿ ಸದಸ್ಯರ ಅಮಾನತ್ತನ್ನು ವಾಪಸ್ಸು ತೆಗೆದುಕೊಂಡಿರುವ ನಿರ್ಧಾರ ಸದನದ ಪಾವಿತ್ರ್ಯತೆಯನ್ನು ನಾಶಗೊಳಿಸಿದ್ದು, ಇದು ಸಂವಿಧಾನ ವಿರೋಧಿಯಾಗಿರುವುದಲ್ಲದೆ ಕೆಟ್ಟ ಸಂಪ್ರದಾಯಕ್ಕೆ ನಾಂದಿಹಾಡಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ (ವ್ಯಕ್ತಿಗತ ನೆಲೆಯಲ್ಲಿ) ಹೇಳಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಮಾನತ್ತು ವಾಪಾಸ್ಸು ನಿರ್ಧಾರ ಸರಿಯಲ್ಲ. ಇದು ಸಾಂವಿಧಾನಿಕವಾಗಿ ವಿರೋಧವಾಗಿದೆ. ವಿರೋಧಪಕ್ಷದ ವಿಪಕ್ಷನಾಯಕ ಸೇರಿದಂತೆ ಸಭಾಧ್ಯಕ್ಷರ ನಡುವೆಯೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು, ಕಾನೂನು ಸಚಿವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ಸ್ವತಃ ವಿಧಾನಸಭಾ ಅಧ್ಯಕ್ಷರಿಗೇ ಇಲ್ಲ, ಸದನವೇ ಸರ್ವೋಚ್ಛವಾಗಿದೆ. ಇವರುಗಳೆಲ್ಲಾ ಇದರ ಒಂದು ಭಾಗ ಮಾತ್ರ. ಸದನಕ್ಕೆ ಮಾಡಿದ ಅವಮಾನವಿದು ಎಂದರು.

ಬಿಜೆಪಿ ಸದಸ್ಯರ ಅಮಾನತ್ತನ್ನು ನಿಯಮ 348ರ ಪ್ರಕಾರ ತೆಗೆದುಕೊಳ್ಳಲಾಗಿದೆ. ಆದರೆ ಅಮಾನತ್ತು ವಾಪಾಸ್ಸು ಪಡೆದಿರುವುದನ್ನು ಯಾವ ನಿಯಮದಡಿ ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನೆ ಮಾಡಿದ ಅವರು, ಸದನದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಸದನದ ಹೊರಗೆ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಮುಂದೆ ಇಂತಹ ತೀರ್ಮಾನಗಳನ್ನು ತೆಗೆದುಕೊಂಡಾಗ, ಈ ತಪ್ಪು ನಿರ್ಧಾರವನ್ನೇ ಉಲ್ಲೇಖಿಸಬೇಕಾಗುತ್ತದೆ. ಹಾಗಾಗಿ ಇದು ಸಂವಿಧಾನ ವಿರೋಧಿಯಾಗಿದೆ ಎಂದರು.

ವಿರೋಧಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಈ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತದೆ. ಹಾಗಾಗಿ ಇದು ಸದನದ ಇತಿಹಾಸದಲ್ಲಿಯೇ ಒಂದು ಕಪ್ಪುಚುಕ್ಕಿಯಾಗಿ ಕಾಣಿಸಿಕೊಳ್ಳಲಿದೆ. ದೇಶದ ಯಾವುದೇ ವಿಧಾನ ಸಭೆಗಳಲ್ಲಿ ಅಥವಾ ಸಂಸತ್ತಿನಲ್ಲಿಯೂ ಕೂಡ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿರುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ವಾಪಸ್ಸು ತೆಗೆದುಕೊಂಡಿರುವ ನಿರ್ಧಾರವನ್ನು ಜರಿಗೊಳಿಸಬಾರದು. ಏನೇ ನಿರ್ಧಾರ ತೆಗೆದುಕೊಳ್ಳುವುದಾದರೂ ಕೂಡ ಸದನ ನಡೆಯುವಾಗಲೇ ತೆಗೆದುಕೊಳ್ಳಬೇಕು. ಮತ್ತು ವಾಪಸ್ಸು ತೆಗೆದುಕೊಳ್ಳುವಂತಹ ತುರ್ತು ಏನು ಇರಲಿಲ್ಲಿ.

ಈ ಘಟನೆಯನ್ನು ಸಂವಿಧಾನದ ಆಶಯಕ್ಕೆ ಚ್ಯುತಿ ಬರದಂತೆ ಅಮಾನತ್ತು ಪ್ರಕರಣವನ್ನು ಕಾಯ್ದಿರಿಸಿ, ತೀರ್ಮಾನ ತೆಗೆದುಕೊಳ್ಳಬಹುದಿತ್ತು. ಅಥವಾ ಸಡಿಲಗೊಳಿಸಬಹುದಿತ್ತು. ಆದರೆ ಅದನ್ನು ಬಿಟ್ಟು ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಸದನದ ಪಾವಿತ್ರ್ಯತೆ ಧಕ್ಕೆ ತರುತ್ತದೆ. ಅಮಾನತ್ತುಗೊಂಡ ಬಿಜೆಪಿ ಶಾಸಕರು ಕೂಡ ಈ ನಿರ್ಧಾರಕ್ಕೆ ಒಪ್ಪದೇ ಕಾನೂನುಬದ್ಧವಾಗಿಯೇ ನಮ್ಮನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ಹೇಳಬೇಕಿತ್ತು ಎಂದು ಸಲಹೆ ನೀಡಿದರು.

Leave a Reply

Your email address will not be published. Required fields are marked *