
ಶಿವಮೊಗ್ಗ :- ಭಾರತವು ಕದನವಿರಾಮ ಘೋಷಿಸಿರುವುದು ರಾಜನೀತಿಯ ಭಾಗವೇ ಹೊರತು, ಅಮೇರಿಕಾಗೆ ಶರಣಾದ ಹಾಗೇ ಅಲ್ಲ ಎಂದು ಬಿಜೆಪಿ ರಾಜಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಗ್ರ ಚಟುವಟಿಕೆ ಶಾಶ್ವತವಾಗಿ ನಿಲ್ಲಬೇಕು ಎಂಬ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರಮೋದಿಯವರ ಸ್ಪಷ್ಟ ನಿರ್ಧಾರವಾಗಿದೆ. ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರಗಾಮಿಗಳ ಅಟ್ಟಹಾಸಕ್ಕೆ 28 ಜನರು ಬಲಿಯಾಗಿರುವುದು ಇಡೀ ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಡಲು ಭಾರತ ಸಜಗಿದಷ್ಟೇ ಅಲ್ಲ, ಆಪರೇಷನ್ ಸಿಂಧೂರ್ ಆರಂಭಮಾಡಿ, ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನೆಲ್ಲಾ ನಾಶಮಾಡಿದೆ. ಸುಮಾರು 8ಕ್ಕೂ ಹೆಚ್ಚು ಉಗ್ರರನ್ನು ಈಗಾಗಲೇ ಹತ್ಯೆಮಾಡಲಾಗಿದೆ. ಇದು ಮೋದಿ ಸರ್ಕಾರದ ದಿಟ್ಟ ನಿರ್ಧಾರವಾಗಿತ್ತು ಎಂದರು.

ಪಾಕಿಸ್ತಾನ ಅಮೇರಿಕಾಕ್ಕೆ ಶರಣಾಗಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿತ್ತು. ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಮನವಿ ಮಾಡಿ, ಯುದ್ಧವಿರಾಮ ಘೋಷಿಸುವಂತೆ ಹೇಳಿದ್ದರ ಪರಿಣಾಮವಾಗಿ ಕದನವಿರಾಮ ಘೋಷಿಸಲಾಗಿದೆ. ಇದು ರಾಜತಂತ್ರದ ಭಾಗವೇ ಹೊರತು, ಟ್ರಂಪ್‌ಗೆ ಶರಣಾದ ಹಾಗಲ್ಲ. ಆದರೆ ಕೆಲವು ಕಾಂಗ್ರೆಸ್ ನಾಯಕರು ಮೋದಿಯವರು ಟ್ರಂಪ್ ಅವರಿಗೆ ಶರಣಾಗಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಅವರು ಅರ್ಥಮಾಡಿಕೊಳ್ಳಬೇಕು ಇದು ಶಾಶ್ವತ ನಿರ್ಧಾರವಲ್ಲ. ಯಾವುದೇ ಸಂದರ್ಭದಲ್ಲಿ ಕದನವಿರಾಮವನ್ನು ವಾಪಾಸ್ ತೆಗೆದುಕೊಳ್ಳಬಹುದು ಎಂದು ಭಾರತ ಸರ್ಕಾರ ಈಗಾಗಲೇ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಯುದ್ಧದಂತಹ ಸಂದರ್ಭದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ರಾಜನೀತಿ ಪಾಲನೆ ಕೂಡ ಸಹಜವಾಗಿಯೇ ಇರುತ್ತದೆ. ಮತ್ತು ಆಪರೇಷನ್ ಸಿಂಧೂರ್ ಯಾವುದೇ ಕ್ಷಣದಲ್ಲಿ ಮುಂದುವರೆಯಬಹುದು ಎಂದರು.
ಡೋನಾಲ್ಡ್ ಟ್ರಂಪ್ ಅವರು ಇದು ವಾಣಿಜ್ಯದ ಒಂದು ಭಾಗವೂ ಆಗಿದೆ ಎಂದು ಹೇಳುತ್ತಲೇ ಭಾರತದ ಬಗ್ಗೆ ಒಂದು ರೀತಿಯಲ್ಲಿ ವ್ಯವಹಾರಿಕವಾಗಿ ಮಾತನಾಡಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಟ್ರಂಪ್ ಅವರ ಹೇಳಿಕೆ ಬಗ್ಗೆ ನಾನೇನೂ ಹೇಳಲಾರೆ. ನಮ್ಮ ರಾಷ್ಟ್ರನಾಯಕರು ಅದಕ್ಕೆ ಉತ್ತರ ಕೊಡುತ್ತಾರೆ ಎಂದರು.
ಮೇ 14ರಿಂದ ತಿರಂಗಾ ಯಾತ್ರೆ, ಮೇ 16ರಂದು ಶಿವಮೊಗ್ಗದಲ್ಲಿ :
ಭಾರತದ ಸೈನಿಕರಿಗೆ ನೈತಿಕಸ್ಥೈರ್ಯ ತುಂಬಲು ಬಿಜೆಪಿ ರಾಜಕೀಯೇತರವಾಗಿ ಮೇ 14ರಿಂದ 23ರ ವರೆಗೆ ರಾಜದ್ಯಂತ ತಿರಂಗಾಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಜೇಂದ್ರ ತಿಳಿಸಿದರು.
ಮೇ೧೪ರಂದು ಬೆಂಗಳೂರಿನಲ್ಲಿ ಬೃಹತ್ ತಿರಂಗಾಯಾತ್ರೆ ನಡೆಯಲಿದೆ. ಪ್ರಾರ್ಥನೆಯೊಂದಿಗೆ ನೈತಿಕ ಬೆಂಬಲ ನೀಡುವುದು ಇದರ ಉದ್ದೇಶವಾಗಿದೆ. ನಿವೃತ್ತ ಯೋಧರು, ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಸೇರಿದಂತೆ ಎಲ್ಲಾ ವರ್ಗದ ಜನರು ಇದರ ಭಾಗವಹಿಸುತ್ತಾರೆ ಎಂದರು.

ಮೇ 15ರಂದು ಮಂಗಳೂರು, ಬೆಳಗಾವಿ ಸೇರಿದಂತೆ ಹಲವು ಕಡೆಗಳಲ್ಲಿ ತಿರಂಗಾಯಾತ್ರೆ ನಡೆಯಲಿದೆ. ಹಾಗೆಯೇ ಮೇ 16ರಂದು ಜಿಲ್ಲಾ ಕೇಂದ್ರಗಳಲ್ಲಿ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಮೇ18ರಿಂದ 23ರ ವರೆಗೆ ಮಂಡಲಮಟ್ಟದಲ್ಲಿ ತಿರಂಗಾಯಾತ್ರೆ ನಡೆಯಲಿದೆ ಎಂದರು.
ಮೇ 16ರಂದು ಶಿವಮೊಗ್ಗದಲ್ಲಿ ನಡೆಯುವ ತಿರಂಗಾಯಾತ್ರೆಯಲ್ಲಿ ನನ್ನನ್ನು ಒಳಗೊಂಡಂತೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕರು, ಜನಪ್ರತಿನಿಧಿಗಳು, ಕಾರ್ಮಿಕರು ಹೀಗೆ ಎಲ್ಲರೂ ಸೇರಿ ಮೆರವಣಿಗೆಯ ಮೂಲಕ ತಿರಂಗಾಯಾತ್ರೆ ನಡೆಸಲಾಗುವುದು. ಈ ಮೆರವಣಿಗೆಯಲ್ಲಿ ಸುಮಾರು 4 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ್ಯ ಸರ್ಜಿ, ಮಾಜಿ ಶಾಸಕ ರುದ್ರೇಗೌಡರು, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಹರಿಕೃಷ್ಣ, ಜ್ಯೋತಿಪ್ರಕಾಶ್. ಚಂದ್ರಶೇಖರ್, ಕೆ.ವಿ. ಅಣ್ಣಪ್ಪ, ವಿಕ್ರಮಂ ಇದ್ದರು.
