google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಹೃದಯಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣದ ಎದುರಿನ ಜಗವು ನ್ಯಾಯಾಲಯದ ಆದೇಶದಂತೆ ಮಹಾನಗರ ಪಾಲಿಕೆಗೆ ಸೇರಿದ್ದು ಈ ಜಾಗದಲ್ಲಿ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬಸ್ ನಿಲ್ದಾಣದ ಎದುರಿನ ಅಶೋಕವೃತ್ತಕ್ಕೆ ಹೊಂದಿಕೊಂಡಿರುವ ತುಂಗಾ ರೈಸ್‌ಮಿಲ್ ಕಾಂಪೌಂಡ್ ಎಂದೇ ಪ್ರಚಲಿತದಲ್ಲಿದ್ದ ಹಿಂದೂ ಸ್ಮಶಾನ ನಂತರ ಖಾಸಗೀ ಬಸ್ ನಿಲ್ದಾಣಕ್ಕೆ ಮೀಸಲಾಗಿಡಲಾಗಿತ್ತು. ಸುಮಾರು 2.16 ಎಕರೆ ಜಗದಲ್ಲಿ ಎರಡು ಎಕರೆ ಜಗವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಹಿಂದೆ ಮಹಾನಗರ ಪಾಲಿಕೆಯ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ, 24 ಜನರಿಗೆ ಮಾರಾಟ ಮಾಡಿದ್ದರು. 1992ರಲ್ಲಿ ನಡೆದ ಈ ಅಕ್ರಮವನ್ನು ಅಂದಿನ ಪಾಲಿಕೆಯ ಕೆಲವು ಅಧಿಕಾರಿಗಳು ಸದರಿ ಜಗಕ್ಕೆ ಸಂಬಂಧಿಸಿದ ಯಾವುದೇ ಮೂಲ ದಾಖಲೆಗಳನ್ನು ಪರಿಶೀಲಿಸದೆ 24 ಜನರ ಹೆಸರಿಗೆ ವರ್ಗಾವಣೆಮಾಡಿಕೊಟ್ಟುಬಿಟ್ಟಿದ್ದರು ಎಂದರು.

ಅಂದಿನಿಂದ ಇದರ ವಿರುದ್ಧ ನಾಗರೀಕರು ಮತ್ತು ಜನಪ್ರತಿನಿಧಿಗಳು ಆಕ್ರೋಶವನ್ನು ಹೊರಹಾಕ ತೊಡಗಿದ್ದರು. 1992ರ ಅಕ್ಟೋಬರ್ ೩೧ರಂದು ನಡೆದ ಮಹಾನಗರ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಈ ಜಗಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ೨೪ ಜನರ ಹೆಸರಿಗೆ ಖಾತೆ ಮಾಡಿರುವುದನ್ನು ರದ್ದುಪಡಿಸಿ, ನಿರ್ಣಯ ಕೈಗೊಂಡಿದ್ದರು. ಅಲ್ಲದೆ ಈ ಪ್ರಕರಣವನ್ನು ಸಿಓಡಿಗೂ ವಹಿಸಲಾಗಿತ್ತು. ಇದರಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಶಿಕ್ಷೆಯೂ ಆಗಿತ್ತು ಎಂದರು.

ನಂತರ ಆ 24 ಜನರು ಮತ್ತು ವಿವಾದಿತ ಜಗದಲ್ಲಿ ಖಾತೆಯಾಗಿದ್ದ ಎರಡು ಎಕರೆ ಜಗ ತಮಗೆ ಸೇರಿದ್ದೆಂದು ತುಂಗಾ ರೈಸ್‌ಮಿಲ್‌ನವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲು ಕೂಡಾ ಏರಿತ್ತು. ಸುಪ್ರಿಂಕೋರ್ಟ್ ಇದರ ವಿಚಾರಣೆಯನ್ನು ಕೆಳಗಿನ ನ್ಯಾಯಾಲಯದಲ್ಲೇ ಇತ್ಯರ್ಥಪಡಿಸಿಕೊಳ್ಳುವಂತೆ ಆದೇಶ ನೀಡಿತ್ತು. ಈಗ ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ನವೆಂಬರ್ 28 2024ರಂದು ತೀರ್ಪುನೀಡಿ, ಈ ಜಗ ಮಹಾನಗರ ಪಾಲಿಕೆಗೆ ಸೇರಿದ್ದು ಎಂದು ತಿಳಿಸಿದೆ.

ಹಾಗಾಗಿ ಪಾಲಿಕೆ ಕೂಡಲೇ ಈ ಬಗ್ಗೆ ಅಗತ್ಯಕ್ರಮ ವಹಿಸಬೇಕು. ಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ
ಗಮನಕ್ಕೆ ತಂದು, ಕೂಡಲೇ ನಗರ ಸಾರಿಗೆ ಬಸ್ಸುಗಳಿಗೆ ನಿಲ್ದಾಣ ಇಲ್ಲ ಆದ್ದರಿಂದ ಈ ಜಗದಲ್ಲಿ ಬಸ್ ನಿಲ್ದಾಣ ನಿರ್ಮಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸದುಪಯೋಗಪಡಿಸಿಕೊಳ್ಳಬೇಕು. ಮಹಾನಗರ ಪಾಲಿಕೆಯ ಅಧಿಕಾರಿಗಳು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, ಅಥವಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ೨೪ ಜನರ ಪರವಾಗಿ ನಿರ್ಧಾರ ತೆಗೆದುಕೊಂಡರೆ ರಾಷ್ಟ್ರಭಕ್ತ ಬಳಗ ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಕೆ.ಈ. ಕಾಂತೇಶ್, ಮಹಾಲಿಂಗ ಶಾಸ್ತ್ರೀ, ಈ. ವಿಶ್ವಾಸ್, ಎಂ. ಶಂಕರ್, ಬಾಲು, ರಮೇಶ್, ವಾಗೀಶ್, ಉಮೇಶ್ ಆರಾಧ್ಯ, ಜದವ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *