
ಶಿವಮೊಗ್ಗ :- ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮೇ 6ರಂದು ಬೆಳಗ್ಗೆ 11 ಗಂಟೆಗೆ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಬಂಜಾರಕನ್ವೆನ್ಷನ್ ಹಾಲ್ ನಲ್ಲಿ ಯುವ ನಾಯಕತ್ವ ಸಮಾವೇಶ ಆಯೋಜಿಸಲಾಗಿದ್ದು, ಈ ಸಮಾವೇಶದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಮಾಡಲಾಗುವುದು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ ಎಸ್. ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಚುನಾವಣೆ ಈಗಾಗಲೇ ನಡೆದಿದ್ದು, ಅಧ್ಯಕ್ಷನಾಗಿ ನಾನು ಆಯ್ಕೆಯಾಗಿದ್ದೇನೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅಧಿಕಾರಿವನ್ನು ಸ್ವೀಕರಿಸಿದ್ದೇವೆ. ಈಗ ಯುವ ನಾಯಕತ್ವ ಸಮಾವೇಶದಲ್ಲಿ ಮತ್ತೊಮ್ಮೆ ನಮ್ಮ ಜವಾಬ್ದಾರಿಗಳನ್ನು ಸ್ವೀಕರಿಸುವ ಸಮಾರಂಭ ನಡೆಯಲಿದ್ದು, ಇದರ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೆರವೇರಿಸಲಿದ್ದಾರೆ ಎಂದರು.
ಸಮಾವೇಶದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಯುವಕರು ಭಾಗವಹಿಸಲಿದ್ದು, ಯುವ ನಾಯಕತ್ವದ ಬಗ್ಗೆ ಮಾರ್ಗದರ್ಶನ, ಮತ್ತು ಪಕ್ಷದ ಸಂಘಟನೆಯ ಬಗ್ಗೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಎದುರಿಸುವ ಕುರಿತಂತೆ ಹಲವು ವಿಷಯಗಳನ್ನು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ನಿಕಟಪೂರ್ವ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಸ್ಪೂರ್ತಿದಾಯಕ ಭಾಷಣ ಮಾಡಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಯುವ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಘಟಕದ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ನೂತನ ಪದಾಧಿಕಾರಿಗಳಿಗೆ ಧ್ವಜ ಹಸ್ತಾಂತರ ಮಾಡುವರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಪ್ರಮಾಣ ವಚನ ಹಾಗೂ ಸಂವಿಧಾನ ಪೀಠಿಕೆ ಭೋಧಿಸುವರು ಎಂದರು.
ಜಿಲ್ಲೆಯ ಕಾಂಗ್ರೆಸ್ ನ ಎಲ್ಲಾ ಹಾಲಿ ಮತ್ತು ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು, ಮಾಜಿ ಜಿಪಂ, ತಾಪಂ ಹಾಗೂ ಮಹಾನಗರ ಪಾಲಿಕೆ ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಮಧುಸೂದನ್, ಚೇತನ್, ಬಾಲಾಜಿ, ನಾಗರಾಜ್, ರವಿ, ವಿಜಯಕುಮಾರ್, ಮುಂತಾವರಿದ್ದರು.
