
ಶಿವಮೊಗ್ಗ :- ವಕ್ಫ್ ಕಾಯ್ದೆ (ತಿದ್ದುಪಡಿ) 2025 ಅನ್ನು ತಕ್ಷಣ ರದ್ದುಗೊಳಿಸಲು ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಇಂದು ನಗರದ ಮುಸ್ಲಿಂ ಹಾಸ್ಟೆಲ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ನಂತರ ಡಿಸಿ ಕಚೇರಿ ಎದುರು ರಸ್ತೆಯಲ್ಲೇ ಪ್ರತಿಭಟನಾ ಸಭೆ ನಡೆಸಿದ ಮುಸ್ಲಿಂ ಧಾರ್ಮಿಕ ಮುಖಂಡ ಶಾಹುಲ್ ಹಮೀದ್ ಮುಕ್ತಿಯಾರ್ ಮಾತನಾಡಿ, ಕೇಂದ್ರ ಸರ್ಕಾರದ ಕಣ್ಣು ತೆರೆಸಲು ನಾವು ಈ ಹೋರಾಟ ಹಮ್ಮಿಕೊಂಡಿದ್ದೇವೆ. ಕಳೆದ 10 ವರ್ಷಗಳಿಂದ ಈ ದೇಶದಲ್ಲಿ ಒಂದು ಧರ್ಮವನ್ನು ಗುರಿಯಾಗಿರಿಸಿ ದಬ್ಬಾಳಿಕೆ ನಡೆಸ ಲಾಗುತ್ತಿದೆ. ನಾವೆಲ್ಲಾ ಭಾರತೀ ಯರೇ. ಈ ಮಣ್ಣಲ್ಲೇ ಹುಟ್ಟಿದವರು. ನಮಗೂ ಈ ದೇಶದಲ್ಲಿ ಸಂವಿಧಾನದ ಪ್ರಕಾರ ಎಲ್ಲಾ ಹಕ್ಕು ಇದೆ. ಮೊದಲು ಮೋದಿ ಸರ್ಕಾರ ದೇಶದ ಗಡಿಯನ್ನು ಭದ್ರಪಡಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಲಿ ಎಂದರು.
ವಕ್ಪ್ ಕಾಯ್ದೆ ತಿದ್ದುಪಡಿ ನಮ್ಮ ಶರಿಯತ್ ಗೆ ವಿರುದ್ಧವಾಗಿದೆ. ವಕ್ಫ್ ಆಸ್ತಿ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಅದು ಭಗವಂತನಿಗೆ ಸೇರಿದ್ದು ಇದನ್ನು ಎಲ್ಲಾ ಧರ್ಮೀಯರು ಲೂಟಿ ಮಾಡಿದ್ದಾರೆ. ವಕ್ಪ್ ಆಸ್ತಿಯನ್ನು ಯಾರೇ ಒತ್ತುವರಿ ಮಾಡಿದ್ದರೂ ಕೂಡ ಅದನ್ನು ಹಿಂದಿರುಗಿಸ ಲೇಬೇಕು. ಮುಸ್ಲಿಮರ ಆಸ್ತಿಯನ್ನು ಬೇರೆ ಯಾರಿಗೂ ಕೈಹಾಕಲು ಸಾಧ್ಯವಿಲ್ಲ. ಈಗಿನ ಕಾನೂನಿನಂತೆ 20-30 ವರ್ಷಗಳ ಕಾಲ ಆತ ವಕ್ಪ್ ಆಸ್ತಿ ಬಳಸಿಕೊಂಡಿದ್ದರೆ ಅದು ಅವನಿಗೇ ನೀಡಬೇಕಾಗುತ್ತದೆ ಎಂದಿದೆ. ಇದು ಕೋಮು ಸೌಹಾ ರ್ದಕ್ಕೆ ಧಕ್ಕೆಯಾಗುತ್ತದೆ ಎಂದರು.
ಜತಿ ಹೆಸರಿನಲ್ಲಿ ಕೊಲ್ಲುವವರು ನಮ್ಮವರಲ್ಲ, ಅದಕ್ಕೆ ಮುಸ್ಲಿಮರು ಹೊಣೆಯಲ್ಲ, ವಕ್ಫ್ ಆಸ್ತಿ ರಕ್ಷಣೆ ಮಾಡಿದರೆ ಈ ದೇಶ ರಕ್ಷಣೆ ಮಾಡಿದಂತೆ ಎಂದರು.
ಅಬ್ದುಲ್ ರಜ ಮಾತನಾಡಿ, ಸಂವಿಧಾನವನ್ನು ನಂಬಿದವರು ದೇಶದ ಏಕತೆ ಬಯಸುತ್ತಾರೆ, ಶರಿಯಾ ವಿರೋಧಿ ಕಾನೂನನ್ನು ಒಪ್ಪಲು ಸಾಧ್ಯವಿಲ್ಲ. ಹಿಂದೂಸ್ಥಾನ ಎಲ್ಲರಿಗೂ ಸೇರಿದ್ದು ಎಂದರು.
ಸುಧೀರ್ ಕುಮಾರ್ ಮರೊಳಿ ಮಾತನಾಡಿ, ಮೋದಿ ಪ್ರಧಾನಿ ಯಾದ ಮೇಲೆ ಯಾರ ಖಾತೆಗೂ 15 ಲಕ್ಷ ರೂ ಬಂದಿಲ್ಲ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ. ದೇಶವನ್ನು ಒಡೆದಾಳಲು ಉಮೀದ್ ಕಾಯ್ದೆ ಜರಿಗೆ ತಂದರು. ಭಾವನೆಗಳನ್ನು ನಾಶ ಮಾಡಿದರು. ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ವಕ್ಪ್ ಆಸ್ತಿ ಅಮಿತ್ ಶಾ ಅಥವಾ ಮೋದಿಗೆ ಸೇರಿದ್ದಲ್ಲ. ಮತ ರಾಜಕಾರಣ ಕೈಬಿಡಿ, ಹಿಂದೂ ಸಮಾಜಕ್ಕೆ ವಕ್ಪ್ ಆಸ್ತಿ ಬೇಕಾಗಿಲ್ಲ. ಆರ್.ಎಸ್.ಎಸ್. ಎಂದರೆ ಹಿಂದೂ ಧರ್ಮವಲ್ಲ, ಅಮಿತ್ ಶಾ ಮತ್ತು ಮೋದಿ ಹಿಂದೂ ಧರ್ಮಕ್ಕೆ ಸೇರಿದ್ದವರಾಗಿದ್ದರೆ ಈ ಕಾಯ್ದೆ ಜರಿಗೆ ತರುತ್ತಿರಲಿಲ್ಲ ಎಂದರು.
ಮುಸ್ಲಿಂ ಮುಖಂಡರು ಮಾತ ನಾಡಿ, ವಕ್ಪ್ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರು. ಭಾರತದ ಮುಸ್ಲಿಮರ ಧ್ವನಿಯಾಗಿ ಈ ಕಾಯ್ದೆ ಇಲ್ಲ. ಇದರಿಂದ ವಕ್ಫ್ ಆಸ್ತಿಗಳ ಸ್ವಾಯತ್ತತೆ ಕಸಿದುಕೊಳ್ಳುತ್ತದೆ. ಸಂವಿಧಾನದ ಗ್ಯಾರಂಟಿಗಳನ್ನು ಉಲ್ಲಂಘಿಸುತ್ತದೆ. ಮತ್ತು ಭಾರತದ ಜತ್ಯತೀತ ರಚನೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ವಕ್ಪ್ ಮಂಡಳಿಗಳಿಗೆ ಮುಸ್ಲಿಮೇತರರನ್ನು ಕಡ್ಡಾಯವಾಗಿ ಸೇರಿಸುವುದು ಸಂವಿಧಾನದ ೨೬ನೇ ವಿಧಿಯ ಅನ್ವಯ ಉಲ್ಲಂಘನೆಯಾಗುತ್ತದೆ. ಇದು ಮುಸ್ಲಿಮರಿಗೆ ತಮ್ಮ ಧಾರ್ಮಿಕ ಸಂಸ್ಥೆಗಳನ್ನು ನಿರ್ಮಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ. ಹಿಂದೂ, ಸಿಖ್ ಅಥವಾ ಇತರ ಧಾರ್ಮಿಕ ಆಸ್ತಿಗಳಿಗೆ ಇಂತರ ನಿಯಮ ಇಲ್ಲ ಎಂದರು.
ದಾಖಲೆ ಇಲ್ಲದ ಮಸೀದಿಗಳು, ಖಬರಸ್ಥಾನಗಳು ಮತ್ತು ದರ್ಗಾಗಳಿಗೆ ಅಪಾಯವನ್ನೊಡ್ಡುತ್ತದೆ. ಮತ್ತು ಸರ್ಕಾರದ ಕೈವಶವಾಗಬಹುದು ಎಂಬ ಆತಂಕವನ್ನು ಪ್ರತಿಭಟನಾ ಕಾರರು ವ್ಯಕ್ತಪಡಿಸಿದರು.
ವಕ್ಪ್ ಆಸ್ತಿಯ ಮಾಲೀಕತ್ವವನ್ನು ಜಿಲ್ಲಾಧಿಕಾರಿಗಳೇ ನಿರ್ಧರಿಸುವ ಅಧಿಕಾರ ನೀಡುವುದು ನ್ಯಾಯಾಲಯದ ಮೇಲ್ವಿಚಾರಣೆ ಇಲ್ಲದೇ ಸ್ವೇಚ್ಛಾಚಾರ ತೀರ್ಮಾನಕ್ಕೆ ದಾರಿ ಮಾಡುತ್ತದೆ. ಅಲ್ಲದೇ, ಇದು ವಕ್ಫ್ ಮಂಡಳಿಗಳ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದರು.
ವಕ್ಫ್ ಸೃಷ್ಠಿಸಲು ೫ ವರ್ಷಗಳ ಕಾಲ ಇಸ್ಲಾಂ ಅನುಸರಿಬೇಕೆಂಬ ನಿಯಮ ತಾರತಮ್ಯವಾಗಿದೆ. ಇತರ ಧರ್ಮಗಳಿಗೆ ಇಂತಹ ನಿಯಮವಿಲ್ಲ. ಪರಿಶಿಷ್ಟ ಜತಿಯ ಮುಸ್ಲಿಮರಿಗೆ ವಕ್ಫ್ ರಚಿಸಲು ಅವಕಾಶ ನಿರಾಕರಿ ಸಿರುವುದು ಕೂಡ ತಾರತಮ್ಯ ವಾಗಿದ್ದು, ಸಂವಿಧಾನದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕ್ಪ್ ಮಂಡಳಿ ಸದಸ್ಯರ ನಾಮ ನಿರ್ದೇಶನವನ್ನು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ವರ್ಗಾಯಿಸುವುದು ಒಕ್ಕೂಟ ತತ್ವಗಳನ್ನು ದುರ್ಬಲ ಗೊಳಿಸುತ್ತದೆ. ಮತ್ತು ರಾಜಕೀಯ ದುರುದ್ದೇಶಕ್ಕೆ ಅವಕಾಶ ನೀಡಿದಂತಾ ಗುತ್ತದೆ ಎಂದು ದೂರಿದರು.
ವಕ್ಫ್ ಟ್ರಿಬ್ಯುನಲ್ ಗಳಿಗೆ ವಿವಾದ ಪರಿಹರಿಸುವ ಅಧಿಕಾರವನ್ನು ಕಡಿಮೆ ಮಾಡುವುದು, ನ್ಯಾಯಾಂಗ ರಕ್ಷಣೆಯನ್ನು ದುರ್ಬಲಗೊಳಿಸಿ ದಂತಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಈ ವಕ್ಪ್ ತಿದ್ದುಪಡಿ ಮಸೂದೆ ಜರಿಯಾಗಬಾರದು ಎಂದು ಒತ್ತಾಯಿಸಿದರು.
ಈ ಮಸೂದೆ ಜತ್ಯತೀತಕ್ಕೆ ಧಕ್ಕೆಯಾಗುತ್ತಿದ್ದು, ಇತರ ಧಾರ್ಮಿಕ ಸಂಸ್ಥೆಗಳನ್ನು ಬಿಟ್ಟು ಕೇವಲ ಮುಸ್ಲಿಂ ವಕ್ಫ್ ಗಳನ್ನು ಗುರಿಯಾಗಿಸುವುದು ಸಂವಿಧಾನ ಸಮಾನತೆ ಮತ್ತು ಜತ್ಯತೀತತೆಯ ತತ್ವಗಳನ್ನು ಉಲ್ಲಂಘಿಸಲಾಗುತ್ತದೆ. ಆದ್ದರಿಂದ ಈ ಕಾಯ್ದೆ ರದ್ದುಗೊಳಿಸಿ 1995ರ ವಕ್ಫ್ ಕಾಯ್ದೆ ರಕ್ಷಣೆ ಮರುಸ್ಥಾಪಿಸ ಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮೊಹಮ್ಮದ್ ಇರ್ಫಾನ್ ಖಾನ್, ಏಜಜ್ ಪಾಶಾ, ಮುಫ್ತಿ ಸೈಯದ್ ಮುಜೀಬುಲ್ಲಾ, ಮುಫ್ತಿ ಮೊಹಮ್ಮದ್ ಶಫೀವುಲ್ಲಾ ಕಾಸ್ಮಿ, ಶೇಖ್ ಅಲಿ, ಮಲಾನಾ ಆಮಿದ್ ಉಮರಿ, ಮಲಾನಾ ಅಬ್ದುಲ್ ಜಬ್ಬಾರ್ ಸಾಧಿಕ್, ಅಫ್ತರ್ ಕೋಡಿಬೇಂದ್ರೆ, ಮಲಾನಾ ಜಬೀವುಲ್ಲಾ ಸಾಬ್, ಮುಫ್ತಿ ಇಫ್ತಾಬ್ ಸಾಹೇಬ್, ಜಮಿಲ್ ಉಮ್ರಿ ಮೊದಲಾದವರು ಇದ್ದರು.
