
ಶಿವಮೊಗ್ಗ: ವಚನ ಚಳುವಳಿಗೆ ಸಂಬಂಧಿಸಿದಂತೆ ಐತಿಹಾಸಿಕ ಸಂಗತಿಗೆ ಶಿವಮೊಗ್ಗ ನಗರ ಸಾಕ್ಷಿಯಾಗಲಿದೆ. ನಗರದ ಅಲ್ಲಮಪ್ರಭು ಬಯಲಿನಲ್ಲಿ ಏಕಕಾಲದಲ್ಲಿ ಒಂದು ಸಾವಿರ ವಚನಗಳನ್ನು ಹಾಡುವ ‘ಸಾವಿರದ ವಚನ’ ಕಾರ್ಯಕ್ರಮ ಮೇ 9ರ ಸಂಜೆ 5.30ಕ್ಕೆ ನಡೆಯಲಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಬಸವ ಜಯಂತಿ ಆಚರಣಾ ಸಮಿತಿ ಅಧ್ಯಕ್ಷರಾದ ಮಾಜಿ ಶಾಸಕ ರುದ್ರೇಗೌಡರು ಮಾಹಿತಿ ನೀಡಿ, ಈ ಕಾರ್ಯಕ್ರಮಕ್ಕಾಗಿ ಅಲ್ಲಮ ಬಯಲಿನಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.
ಅಲ್ಲಮಪ್ರಭು ಬಯಲಿನಲ್ಲಿ 260 ಅಡಿ ಅಗಲ ಹಾಗೂ 7 ಮೆಟ್ಟಿಲುಗಳ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಕಾರ್ಯಕ್ರಮಕ್ಕೆ 7-8 ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಅಂದು ಕಾರ್ಯಕ್ರಮಕ್ಕೆ ಬರುವವರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಭಕ್ತಿ ಭಂಡಾರಿ, ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪದ ಕರ್ತೃ, ಕರ್ನಾಟಕದ ಸಾಂಸ್ಕೃತಿಕ ನಾಯಕ ಅಣ್ಣ ಬಸವಣ್ಣನವರ 38 ವಚನಗಳನ್ನು ಸಿ. ಅಶ್ವತ್ ಅವರು 8 ಹಾಡುಗಳ ರೂಪದಲ್ಲಿ ‘ಕೂಡಲಸಂಗಮ’ ಎಂಬ ಹೆಸರಿನಲ್ಲಿ ಹೊರತಂದಿದ್ದಾರೆ. ವ್ಯಕ್ತಿಯೊಬ್ಬ ಭಕ್ತಿಯ ಶಿಖರ ಏರುವ ರೂಪಕವಾಗಿ ಕೂಡಲಸಂಗಮದ ವಚನಗಳು ಮೂಡಿ, ಜನಪ್ರಿಯಗೊಂಡಿವೆ ಎಂದರು.

ಈ ಎಲ್ಲಾ ವಚನಗಳೂ ಸಾಂಸ್ಕೃತಿಕವಾಗಿ ಮಹತ್ವ ಉಳ್ಳವೂ ಮತ್ತು ಸದಾ ಗುನುಗುತ್ತಾ ಇರುವ ಗುಣವುಳ್ಳವೂ ಆಗಿರುವಂತವು. ಇಂತಹ ವಿಶಿಷ್ಟ ವಚನಗಳನ್ನು ಒಂದೇ ವೇದಿಕೆಯಲ್ಲಿ ಸಾವಿರ ಕಂಠಗಳು ಹಾಡುವ ಹಾಗೂ ಕೇಳುವುದು ರೋಮಾಂಜನಕಾರಿ ಆಗಲಿದೆ ಎಂದು ನುಡಿದರು.
ಶಿವಮೊಗ್ಗ ಅಲ್ಲಮಪ್ರಭುಗಳು, ಅಕ್ಕಮಹಾದೇವಿ, ಗೊಗ್ಗಯ್ಯ, ಸತ್ಯಕ್ಕ ಮೊದಲಾದ 40 ಕ್ಕೂ ಹೆಚ್ಚ್ಕಿನ ಶರಣರ ತವರಾಗಿದೆ. ಶಿವಮೊಗ್ಗ ನಗರವನ್ನು ಬಸವ ಜಯಂತಿ ಆಚರಣೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಚಿಂತನೆಯನ್ನು ಬಸವ ಜಯಂತಿ ಆಚರಣಾ ಸಮಿತಿ ಹೊಂದಿದೆ ಹಾಗೂ ಅದರ ಫಲವಾಗಿ ಬಸವೋತ್ಸವ ರೂಪು ಗೊಳ್ಳುತ್ತಿದೆ ಎಂದು ತಿಳಿಸಿದರು.

ಶ್ರೀ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾ ಸ್ವಾಮೀಜಿ ಮಾತನಾಡಿ, ಅಣ್ಣ ಬಸವಣ್ಣನವರ ಹಾಗೂ ಇತರ ಶರಣರ ತತ್ವಗಳು ಹಿಂದೆಂದಿ ಗಿಂತಲೂ ಇಂದು ಮನುಕುಲಕ್ಕೆ ಅತ್ಯಗತ್ಯವಾಗಿಬೇಕಾಗಿವೆ. ಆ ನಿಟ್ಟಿನಲ್ಲಿ ಈ ತರಹದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ‘ಸಾವಿರದ ವಚನ’ ಕಾರ್ಯಕ್ರಮ ಯಾವುದೋ ಒಂದು ಜಾತಿಗೆ ಸೀಮಿತವಾದ ಉತ್ಸವವಲ್ಲ ಬದಲಿಗೆ ಬಸವತತ್ವ ಆರಾಧಕರ, ಒಪ್ಪುವವರ ಮತ್ತು ಬಯಸು ವವರೆಲ್ಲರ ಉತ್ಸವ ಎಂದರು.
ಕಾರ್ಯಕ್ರಮದಲ್ಲಿ ವಚನಗಳನ್ನು ಹಾಡುವವರಿಗಾಗಿ ಆನ್ಲೈನ್ ಮೂಲಕ ನೋಂದಣಿ ಮಾಡಲು ಕೋರಿಕೊಳ್ಳಲಾಗಿತ್ತು. ಸಾವಿರದ ಇನ್ನೂರಕ್ಕೂ ಹೆಚ್ಚು ಜನ ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ದೂರದ ಊರುಗಳಾದ ಚೆನ್ನೈ, ಬೆಂಗಳೂರು ಇನ್ನಿತರೆಡೆಗಳಿಂದ ಗಾಯಕರು ಬರುತ್ತಿದ್ದಾರೆ ಎಂದರು.

ಸಿ. ಅಶ್ವಥ್ ಅವರ ರಾಗ ಸಂಯೋಜನೆಯಲ್ಲಿ ಗಾಯಕರಾಗಿ ಹಾಡಿದ್ದ ಮೈಸೂರಿನ ಜನಾರ್ದನ್(ಜನ್ನಿ) ಅವರು, ಶಿವಮೊಗ್ಗದವರೇ ಆದ ಕೆ. ಯುವರಾಜ್, ಸಿ. ಅಶ್ವಥ್ ಅವರ ಸಹಾಯಕರಾಗಿದ್ದ ಬೆಂಗಳೂರಿನ ಸುದರ್ಶನ್, ಚಿಕ್ಕಮಗಳೂರಿನ ಮಲ್ಲಿಗೆ ಸುಧೀರ್ ಕಾರ್ಯಕ್ರಮಕ್ಕೆ ಜೊತೆಯಾಗಿದ್ದಾರೆ. ಶಿವಮೊಗ್ಗದ ಪ್ರಖ್ಯಾತ ಸಂಗೀತ ವಿದ್ವಾಂಸರು ಒಟ್ಟಾಗಿ ತರಬೇತಿ ಹಾಗೂ ಕಾರ್ಯಕ್ರಮದ ಸಾರಥ್ಯ ವಹಿಸಿದ್ದಾರೆ. ವಿದ್ವಾನ್ ಶೃಂಗೇರಿ ಹೆಚ್.ಎಸ್. ನಾಗರಾಜ್ ಜಯಶ್ರೀಧರ್, ನಾಗರತ್ನ ಟಿ.ಜೆ., ಪ್ರಹ್ಲಾದ್ ದೀಕ್ಷಿತ್, ಸುರೇಖಾ ಹೆಗ್ಡೆ, ಮಹೇಂದ್ರ ಗೋರೆ, ವಿನಯ್ ಯಜ್ಞನಾರಾಯಣ, ಉಮಾ ದಿಲೀಪ್ ಹಾಗೂ ಇನ್ನು ಹಲವು ಸಂಗೀತ ವಿದ್ವಾಂಸರು ಸಾವಿರಾರು ಜನರಿಗೆ ಕಳೆದ ಹತ್ತಾರು ದಿನಗಳಿಂದ ತರಬೇತಿ ನೀಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಯಂತಿ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್, ಖಜಾಂಚಿ ಹೆಚ್.ಸಿ. ಯೋಗೀಶ್, ವಿಧಾನಪರಿಷತ್ ಶಾಸಕ ಡಾ. ಧನಂಜಯ ಸರ್ಜಿ, ತಮ್ಮಡಿಹಳ್ಳಿ ನಾಗರಾಜ್, ಮೋಹನ್ ಬಾಳೆಕಾಯಿ, ಸಿದ್ದೇಶ್, ಕಿರಣ್, ಶಂಕರಪ್ಪ, ಬಳ್ಳೆಕೆರೆ ಸಂತೋಷ್ ಇನ್ನಿತರರು ಇದ್ದರು.
