google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಇಂದೂ ಕೂಡ ಮಾರಿ ಗದ್ದುಗೆಯಲ್ಲಿ ಪೂಜೆ, ಮಡಿಲಕ್ಕಿ ಅರ್ಪಣೆ, ಹರಕೆ ಕೋಳಿ ಸಮರ್ಪಣೆ ನಡೆಯಿತು. ಭಕ್ತರ ಆಗಮನ ಇಂದು ಕೂಡ ಹೆಚ್ಚಾಗಿತ್ತು. ಸರದಿ ಸಾಲಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.

ತವರು ಮನೆಯ ಉತ್ಸವದೊಂದಿಗೆ ಗದ್ದುಗೆ ಪ್ರವೇಶ ಮಾಡಿದ ಶ್ರೀ ಮಾರಿಕಾಂಬೆಯನ್ನು ನೋಡಲು ಜನ ಜತ್ರೆಯೇ ನೆರೆದಿದ್ದು, ದೇವಿಯನ್ನು ನೋಡಲು ಎರಡು ಕಣ್ಣುಗಳು ಸಾಲದಾಗಿತ್ತು. ಜೊತೆಗೆ ದೇವಸ್ಥಾನದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಕೂಡ ಬಲು ಜೋರಾಗಿತ್ತು.

ಶ್ರೀಪ್ರತಿದಿನವೂ ವಿವಿಧ ಸಮಾಜದವರು ಸರದಿಯಂತೆ ಪೂಜೆ ನೆರವೇರಿಸುತ್ತಿದ್ದಾರೆ. ಪ್ರಮುಖವಾಗಿ ವಾಲ್ಮೀಕಿ, ಉಪ್ಪಾರ, ಮಡಿವಾಳ ಸಮಾಜದವರು ನಾಲ್ಕುದಿನಗಳ ಕಾಲ ಗದ್ದುಗೆಯಲ್ಲಿ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

ಬುಧವಾರ ಬೆಳಗ್ಗಿನಿಂದಲೇ ಕುರಿ ಹರಕೆಗಳು ನಡೆದು ಮಧ್ಯರಾತ್ರಿವರೆಗೂ ಹಬ್ಬ ಮಾಡುವವರ ಮನೆಗಳಲ್ಲಿ ಕುರಿ ಮಾಂಸದ ಅಡುಗೆಯ ಸಂಭ್ರಮ ಕಂಡು ಬಂದಿತ್ತು. ನಗರದ ರಸ್ತೆಗಳೆಲ್ಲಾ ತುಂಬಿ ತುಳುಕುತ್ತಿದ್ದವು. ಹಲವು ಕಡೆ ಸಂಜೆ ವಾಹನ ಸಂಚಾರ ದಟ್ಟಣೆ ಇತ್ತು. ರಾಜ್ಯದ ವಿವಿಧೆಡೆಯಿಂದ ಹಬ್ಬಕ್ಕೆ ನೆಂಟರು ಭಕ್ತರು ಆಗಮಿಸಿದ್ದು, ಕಂಡು ಬಂದಿತು. ಇಂದು ಕೂಡ ಹಬ್ಬದ ಸಂಭ್ರಮ ಮನೆಗಳಲ್ಲಿ ಜೋರಾಗಿದೆ.

ಮಾರ್ಚ್ ೬ರಿಂದ ೮ರ ವರೆಗೆ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಕೂಡ ಆಯೋಜಿಸಲಾಗಿದೆ. ಜತ್ರೆಯು ಫೆ. ೨೮ರ ಶನಿವಾರ ರಾತ್ರಿ ಅಮ್ಮನವರನ್ನು ವನಕ್ಕೆ ತೆಗೆದುಕೊಂಡು ಹೋಗುವ ಮೂಲಕ ತೆರೆ ಬೀಳಲಿದೆ.

Leave a Reply

Your email address will not be published. Required fields are marked *