google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಪರಿಶಿಷ್ಟ ಜಾತಿಯೊಳಗಿನ ಉಪಜತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ) ತಮಟೆ ಚಳುವಳಿ ನಡೆಸಿತು.

ಒಳ ಮೀಸಲಾತಿ ಕುರಿತು ಇದ್ದ ಗೊಂದಲಗಳಿಗೆ ಸುಪ್ರೀಂಕೋರ್ಟ್ ಈಗ ತೆರೆ ಎಳೆದಿದೆ. ಸುಪ್ರೀಂಕೋರ್ಟ್ ಆದೇಶ ಬಂದು ಒಂದು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ಆದೇಶವನ್ನು ಅನುಷ್ಠಾನಗೊಳಿಸದೇ ನಿದ್ದೆ ಹೊಡೆಯುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಆ. 1ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದೆ. ಈ ತೀರ್ಪನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಆದೇಶಿಸಿರುವುದರಿಂದ ತಕ್ಷಣವೇ ಅನುಷ್ಠಾನಗೊಳಿಸಬೇಕು. ಡಿಎಸ್‌ಎಸ್‌ನ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪನವರ ಜನ್ಮದಿನವಾದ ಜೂ. 9ರಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು ಹಾಗೂ ಪ್ರೊ.ಕೃಷ್ಣಪ್ಪನವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು. ಬಾಕಿ ಉಳಿದಿರುವ ಬ್ಯಾಕ್‌ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಬಗರ್‌ಹುಕುಂ ಸಾಗುವಳಿಗೊಳಿಯನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ದಸಂಸನ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಪ್ರಮುಖರಾದ ಶಿವಬಸಪ್ಪ, ಚಂದ್ರಣ್ಣ ಜೋಗಿ, ಬಿ.ಎ.ಕಾಟ್ಟೆ, ಎಂ.ಏಳುಕೋಟಿ, ನಾಗರಾಜ್, ಬೊಮ್ಮನಕಟ್ಟೆ ಕೃಷ್ಣ, ರಮೇಶ್ ಚಿಕ್ಕಮರಡಿ, ಶ್ರೀನಿವಾಸ್, ಹಸೂಡಿ ಬಸವರಾಜ್, ಹರಿಗೆ ರವಿ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *