ಶಿವಮೊಗ್ಗ :- ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು ಹಾಗೂ ಮಕ್ಕಳಲ್ಲಿನ ವಿಭಿನ್ನ ಪ್ರತಿಭೆಯನ್ನು ಅನಾವರಣಗೊಳಿಸುವುದು ಪ್ರತಿಭಾ ಕಾರಂಜಿ. ಈ ಮಕ್ಕಳ ಸಾಂಸ್ಕೃತಿಕ ಹಬ್ಬ ಯಶಸ್ವಿಯಾಗಲಿ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಆಶಿಸಿದರು.
ಜಿಲ್ಲಾಡಳಿತ, ಜಿ.ಪಂ., ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ಆಶ್ರಯದಲ್ಲಿ ಕಸ್ತೂರಬಾ ಬಾಲಿಕಾ ಪದವಿಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಗುರುವಾರ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಒಂದು ಅತ್ಯುತ್ತಮ ಕಾರ್ಯಕ್ರಮ. ಇಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಎಲ್ಲ ಮಕ್ಕಳು ಗೆಲ್ಲಲು ಸಾಧ್ಯವಿಲ್ಲ. ಆದರೆ ಭಾಗವಹಿಸುವ ಅವಕಾಶವಿದ್ದು ಸ್ಪರ್ಧಾತ್ಮಕವಾಗಿ ಪಾಲ್ಗೊಳ್ಳಬೇಕು. ನಮ್ಮದು ಸಾಂಸ್ಕೃತಿಕ ರಾಷ್ಟ್ರ. ಅದಕ್ಕೆ ಪೂರಕವಾದ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. ವೈವಿಧ್ಯಮಯ ಸ್ಪರ್ಧೆಗಳು ಮತು ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಬೇಕಿದೆ ಎಂದರು.
ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರಣ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಡಿಡಿಪಿಐ ಎಸ್. ಆರ್. ಮಂಜುನಾಥ್, ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದಿನೇಶ್ ಜಿ.ಎಂ., ಕಸ್ತೂರಬಾ ಪ್ರೌಢಶಾಲೆ ಪ್ರಾಂಶುಪಾಲರಾದ ವೆಂಕಟೇಶ್ ಮಾತನಾಡಿದರು.
ಪ್ರತಿಭಾ ಕಾರಂಜಿಯಲ್ಲಿ ಚಿನ್ನರ ಕಲರವ…

ಪ್ರತಿಭಾ ಕಾರಂಜಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಿಮಿಕ್ರಿ, ಕ್ಲೇಮಾಡ್ಲಿಂಗ್, ಛದ್ಮವೇಷ, ಆಶುಭಾಷಣ, ಭರತನಾಟ್ಯ, ರಂಗೋಲಿ, ಚರ್ಚಾಸ್ಪರ್ಧೆ, ಕಥೆ ಹೇಳುವುದು, ಕವನ, ಪದ್ಯವಾಚನ, ಪ್ರಬಂಧ ರಚನೆ, ಜಾನಪದ ನೃತ್ಯಮ ಗಝಲ್, ಕವಾಲಿ, ಚಿತ್ರಕಲೆ, ಭಾವಗೀತೆ ಮುಂತಾದ 14 ವಿಭಾಗಕ್ಕೆ ಸೇರಿದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಅರಕೆರೆಯ ಪ್ರಾಥಮಿಕ ಶಾಲೆಯ 4ನೇ ತರಗತಿ ಕಾರ್ತೀಕ್ ಹುಲಿ ವೇಷಧಾರಿಯಾಗಿ, ಹೊಳಲೂರು ಆಕ್ಸ್ಫರ್ಡ್ ಶಾಲೆಯ 3ನೇ ತರಗತಿ ಚೇತನ್ ಬಿ.ಕೆ ವೆಂಕಟೇಶ್ವರ ಸ್ವಾಮಿ, ಮಹಾವೀರ ಶಾಲೆಯ 4ನೇ ತರಗತಿ ಸುವ್ರತಾ ವಟುವಾಗಿ, ಆದಿಚುಂಚನಗಿರಿ ಶಾಲೆಯ 4ನೇತರಗತಿ ಸುದೀಕ್ಷ ಆಂಜನೇಯ ಹಾಗೂ ಪ್ಲಾಸ್ಟಿಕ್ ದುಷ್ಪರಿಣಾಮ ಸೇರಿದಂತೆ ವಿವಿಧ ಛದ್ಮವೇಶಧಾರಿಗಳು ಗಮನ ಸೆಳೆದರು. ಬಿಇಓ ರಮೇಶ್ ಸ್ವಾಗತಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.