ಶಿವಮೊಗ್ಗ :- ದಯವಿಲ್ಲದ ಧರ್ಮ ಅದ್ಯಾವುದಯ್ಯ ಎಂದು 12ನೇ ಶತಮಾನದಲ್ಲಿ ಬಸವಣ್ಣವರು ಹೇಳಿದರು, ಆದರೆ, ಇಂದು ಭಯವಿಲ್ಲದ ಧರ್ಮ ಅದ್ಯಾವುದಯ್ಯ ಎಂದು ಯೋಚಿಸಿಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಕಲ್ಬುರ್ಗಿ ಜಿಗರಹಳ್ಳಿ ಶ್ರೀಮರುಳಶಂಕರ ದೇವರ ಗುರುಪೀಠದ ಶ್ರೀಸಿದ್ಧಬಸವ ಕಬೀರ ಸ್ವಾಮೀಜಿ ಹೇಳಿದ್ದಾರೆ.
ಶಿವಮೊಗ್ಗ ಬಸವಕೇಂದ್ರದಲ್ಲಿ ಚಿಂತನ ಕಾರ್ತಿಕದ ಅಂಗವಾಗಿ ಹಮ್ಮಿಕೊಂಡಿದ್ದ ಶರಣ ಸಂಗಮ-297 ಕಾರ್ಯಕ್ರಮದಲ್ಲಿ ಅನುಭಾವ ಭಕ್ತಿಗಾಧಾರ ಎಂಬ ವಿಷಯ ಕುರಿತು ಅವರು ಪ್ರವಚನ ನೀಡಿದರು.
ಇಂದು ಮೌಢ್ಯತೆಯೇ ಒಂದು ಧರ್ಮವಾಗಿದೆ. ಸಹಸ್ರದೀಫೋತ್ಸವ, ಲಕ್ಷದೀಪೋತ್ಸವ, ಮಂತ್ರ-ತಂತ್ರ, ಧೂಪ, ದೀಪ, ವ್ರತ ಇತ್ಯಾದಿ ಪ್ರದರ್ಶನದ ಆಚರಣೆಗಳಿಗೆ ನಾವು ದಾಸರಾಗಿದ್ದೇವೆ. ಹಣ ಕೊಟ್ಟು ದೇವರ ಮುಂದೆ ಹಚ್ಚುವ ದೀಪದಿಂದ ಪುಣ್ಯ ಲಭಿಸುವುದಿಲ್ಲ ಎಂದರು.
ನಮಗೆ ನಮ್ಮ ಭಕ್ತಿಯ ಅರಿವಿರಬೇಕು. ನಾವು ಏನು ಮಾಡುತ್ತಿದ್ದೇವೆ, ಏತಕ್ಕಾಗಿ ಮಾಡುತ್ತಿದ್ದೇವೆ, ಹೇಗೆ ಮಾಡುತ್ತಿದ್ದೇವೆ ಎಂಬ ಅರಿವು ಇಟ್ಟುಕೊಳ್ಳಬೇಕು. ಮನಸ್ಸು ಶುದ್ಧವಾಗಿಟ್ಟುಕೊಳ್ಳುವುದೇ ನಿಜವಾದ ಭಕ್ತನಿಗೆ ಇರಬೇಕಾದ ಬಹುಮುಖ್ಯ ಗುಣ, ಪರಸತಿ- ಪರದೈವ-ಪರಧನಕ್ಕೆ ಆಸೆ ಪಡದಿರುವವನೇ ನಿಜವಾದ ಭಕ್ತ. ಸತ್ಯ-ಅಸತ್ಯಗಳ ಪರಾಮರ್ಶೆ, ಅನುಭಾವದ ಆಧಾರದಿಂದ ಕೂಡಿದ ಶರಣ ಚಳವಳಿ ಜನರ ಮನದಲ್ಲಿ ಉಳಿಯಲು ಇದೇ ಮುಖ್ಯ ಕಾರಣ ಎಂದರು.
ಸಾನಿಧ್ಯ ವಹಿಸಿದ್ದ ಬಸವಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಭಕ್ತಿ ಎಂಬುದು ಪ್ರದರ್ಶನವಾದಾ ಅದು ಅನುಭಾವದಿಂದ ದೂರವಾಗುತ್ತದೆ. ಸಂಕೇತ, ಬಣ್ಣ, ಲಾಂಛನ ಇದ್ಯಾದಿಗಳಿಗೆ ಇರುವ ಮಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಈ ಲಾಂಛನಗಳಿಗೆ ಇರುವ ತಾತ್ವಿಕ ಅರ್ಥವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅನಗತ್ಯ ಧಾರ್ಮಿಕ ಆಚರಣೆಗಳ ಬಂಧನದಲ್ಲಿ ಸಿಲುಕಿದ್ದೇವೆ. ಏನನ್ನು ಪಡೆಯಲು, ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಯೋಚಿಸುತ್ತಿಲ್ಲ. ನಮ್ಮ ಮತಿಗೆ-ಮಿತಿಗೆ ಸಿಲುಕದಿರುವುದೇ ಅನುಭಾವ. ಇದು ಮೂಗ ಕಂಡ ಕನಸಿನಂತೆ ಎಂದು ವಿಶ್ಲೇಷಿಸಿದರು.
ಬಸವಕೇಂದ್ರದ ಅಧ್ಯಕ್ಷರಾದ ಜಿ. ಬೆನಕಪ್ಪ ಅಧ್ಯಕ್ಷತೆವಹಿಸಿದ್ದರು. ಲಿಂಗಾಯತ- ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿ ನಿರ್ದೇಶಕ ಎನ್.ವಿ. ಈರೇಶ್ ವೇದಿಕೆಯಲ್ಲಿ ಇದ್ದರು.