
ಶಿವಮೊಗ್ಗ :- ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಮತ್ತೆ ಬ್ರಿಗೇಡ್ ಚರ್ಚೆ ಆರಂಭವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ (ರಾಯಣ್ಣ ಚನ್ನಮ್ಮ ಬ್ರಿಗೇಡ್) ರಚನೆ ಮಾಡಲು ಅ. 7ರಂದು ಬೆಳಿಗ್ಗೆ 11ಕ್ಕೆ ಹುಬ್ಬಳ್ಳಿಯ ಸ್ವಾತಿ ಹೋಟೆಲ್‌ನಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ಜಮಖಂಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಜಯಮೃತ್ಯುಂಜಯ ಸ್ವಾಮಿಜಿಗಳು ನನಗೆಮತ್ತು ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರಿಗೆ ಖಡ್ಗ ಕೊಟ್ಟು ಹಿಂದುಗಳಿಗೆ ರಕ್ಷಣೆ ಕೊಡಿ ನಿಮಿಬ್ಬರಲ್ಲಿ ರಾಯಣ್ಣ ಮತ್ತು ಚನ್ನಮ್ಮ ಅವರ ರಕ್ತವಿದೆ. ಈ ಹಿನ್ನಲೆಯಲ್ಲಿ ಆರ್‌ಸಿಬಿ ರಚನೆ ಮಾಡಿ ಎಂದು ಹೇಳಿದ್ದರು. ಅಲ್ಲಿದ್ದ ಎಲ್ಲರೂ ಇದನ್ನು ಹರ್ಷದಿಂದ ಸ್ವಾಗತಿಸಿ ಬೆಂಬಲ ನೀಡಿದ್ದರು. ಈಗ ಅವರ ಆಶೀರ್ವದಾದಂತೆ ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು.
ಈ ಸಭೆಯಲ್ಲಿ ಯತ್ನಾಳ್ ಸೇರಿದಂತೆ ಸುಮಾರು ೪೦ಕ್ಕೂ ಹೆಚ್ಚು ಮುಖಂಡರು ಭಾಗವಹಿಸಲಿದ್ದಾರೆ. ಇದು ಪಕ್ಷಾತೀತ ಸಭೆಯಾಗಿದೆ. ಇದರ ಮುಖ್ಯ ಉದ್ದೇಶವೇ ಎಲ್ಲ ವರ್ಗದ ಬಡವರಿಗೆ ನ್ಯಾಯ ಒದಗಿಸುವುದೇ ಆಗಿದೆ. ಆದರೆ ಹಿಂದೂ ಸಮಾಜಕ್ಕೆ ಸೇರಿದವರು ಮಾತ್ರ ಇದರಲ್ಲಿ ಭಾಗವಹಿಸಬೇಕು. ಈ ಸಭೆಯಲ್ಲಿ ಸಾಧು ಸಂತರು ಭಾಗವಹಿಸುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರ ಬೆಂಬಲ ಪಡೆಯುವ ಬಗ್ಗೆ ಚರ್ಚೆ ನಡೆಸುತ್ತೇವೆ. ಮತ್ತು ಏನೂ ಹೆಸರಿಡಬೇಕು ಎಂದು ಚರ್ಚಿಸುತ್ತೇವೆ ಎಂದರು.
ರಾಜಕಾರಣಗಳು ಇತ್ತೀಚೆಗೆ ಭಾಷೆ ಬಳಸುವ ಬಗ್ಗೆ ಎಚ್ಚರ ವಹಿಸಬೇಕು. ಮೂರು ಪಕ್ಷದವರು ಕೂಡ ತಮ್ಮ ಭಾಷೆಯ ಬಗ್ಗೆ ಹಿಡಿತವಿಟ್ಟುಕೊಂಡಿಲ್ಲ. ಮೂರು ಪಕ್ಷದ ಮುಖಂಡರಾದ ಸಿದ್ದರಾಮಯ್ಯ ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಇವರ ಆರೋಪಗಳು ಏನೇ ಇರಲಿ ಈ ಮೂರು ಜನರು ಕ್ಲೀನ್ ಚಿಟ್ ತೆಗೆದುಕೊಳ್ಳಲಿ, ಆದರೆ ಅದಕ್ಕೂ ಮೊದಲೇ ಒಬ್ಬರಿಗೆ ಒಬ್ಬರು ಮಾತನಾಡುವ ರೀತಿ ಮಾತ್ರ ಅವರಿಗೆ ಶೋಭೆ ತರುವುದಲ್ಲ ಎಂದರು.
ಬಿಜೆಪಿಗೆ ಮರಳಿ ಹೋಗುವ ಪ್ರಶ್ನೆ ಸದ್ಯಕ್ಕಂತೂ ಇಲ್ಲ, ಆ ಬಗ್ಗೆ ಚರ್ಚೆಯಾಗಲೇಬೇಕು. ಕುಟುಂಬ ರಾಜಕಾರಣವನ್ನು ವಿರೋಧಿಸಿ ನಾನು ಚುನಾವಣೆಗೆ ನಿಂತಿದ್ದೆ, ನಾನು ತಪ್ಪು ಮಾಡಿರಲಿಲ್ಲ, ಮೊದಲು ಆ ಬಗ್ಗೆ ಚರ್ಚೆಯಾಗಲಿ ಆಮೇಲೆ ಬಿಜೆಪಿಗೆ ಸೇರುವ ಮಾತು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಮಹಾಲಿಂಗಯ್ಯಶಾಸ್ತ್ರಿ, ಕುಬೇಂದ್ರ, ರುದ್ರಯ್ಯ ಶಾಸ್ತ್ರಿ, ಶಿವಾಜಿ, ಮೋಹನ್ ಮುಂತಾದವರು ಇದ್ದರು.