ಶಿವಮೊಗ್ಗ : ನಗರದ ಹೃದಯ ಭಾಗದಲ್ಲಿರುವ ಮಹಾತ್ಮಾ ಗಾಂಧಿ ಉದ್ಯಾನವನವನ್ನು 1.8 ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಇಂದಿನಿಂದಲೇ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ಅವರು ಇಂದು ಗಾಂಧಿಪಾರ್ಕಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಉದ್ಯಾನವನ ಕೆಲ ವರ್ಷಗಳಿಂದ ನಿರ್ವಹಣೆ ಇಲ್ಲದೇ ಸೊರಗಿತ್ತು. ಈಗ ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ದುರಸ್ಥಿ ಕಾರ್ಯವನ್ನು ಕೈಗೊಂಡು ಪ್ರಮುಖ ಕಾರ್ಯಗಳನ್ನು ಪೂರೈಸಿದ್ದಾರೆ ಎಂದರು.
ಕಾರಂಜಿ, ಕಾಂಪೌಂಡ್ ಗ್ರಿಲ್, ಮಕ್ಕಳ ರೈಲು, ಮಕ್ಕಳ ಆಟಿಕೆಗಳು, ಜಿಮ್ ಉಪಕರಣಗಳು, ಈಜುಕೊಳ ಮೊದಲಾದವುಗಳ ಜೀರ್ಣೋದ್ಧಾರ ಮಾಡಲಾಗಿದೆ. ಪಾರ್ಕಿನ ನಿರ್ವಹಣೆಗೆ ಪ್ರತ್ಯೇಕವಾಗಿ ಒಂದು ಸಮಿತಿ ರಚಿಸಲಾಗಿದೆ. ಇದರಲ್ಲಿ ಉಪ ಆಯುಕ್ತರು (ಆಡಳಿತ), ಉಪ ಆಯುಕ್ತರು (ಅಭಿವೃದ್ಧಿ), ಸಹಾಯಕ ಕಾರ್ಯಪಾಲ ಅಭಿಯಂತರು (ಪರಿಸರ), ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್), ಕಾರ್ಯಪಾಲಕ ಅಭಿಯಂತರರು (ಸಿವಿಲ್) ಮತ್ತು ಎಲೆಕ್ಟ್ರಿಕಲ್ ವಿಭಾಗದ ಅಧಿಕಾರಿಗಳು ಈ ಸಮಿತಿಯಲ್ಲಿ ಇರುತ್ತಾರೆ. ಸಾರ್ವಜನಿಕರಿಗೆ ಏನೇ ತೊಂದರೆಯಾದರೂ ಈ ಸಮಿತಿಯ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಮಾರಿಜತ್ರೆ ಸಮೀಪಿಸುತ್ತಿರುವುದರಿಂದ ಇನ್ನೂ ಸಣ್ಣ-ಪುಟ್ಟ ಕೆಲಸಗಳು ಬಾಕಿ ಇದ್ದರೂ ಸಹ ಇಂದಿನಿಂದಲೇ ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಯಾವುದಕ್ಕೆ ಎಷ್ಟು ನಿಗಧಿಪಡಿಸಲಾಗಿದೆ…
ಈ ಹಿಂದೆ ಇದ್ದಂತೆ ಪ್ರವೇಶ ಶುಲ್ಕ ವಯಸ್ಕರಿಗೆ 20 ರೂಪಾಯಿ, ಮಕ್ಕಳಿಗೆ 10 ರೂ. ಮುಂದುವರಿಸಲಾಗಿದೆ. ಮಕ್ಕಳ ರೈಲು ಪ್ರಯಾಣಕ್ಕೆ ವಯಸ್ಕರಿಗೆ 20ರೂ., ಮಕ್ಕಳಿಗೆ 10 ರೂ. ನಿಗಧಿಪಡಿಸಲಾಗಿದೆ. ನೂತನವಾಗಿ ನಿರ್ಮಿಸಿ ಇಂದು ಸಾರ್ವಜನಿಕ ವೀಕ್ಷಣೆಗೆ ತೆರೆಯಲಾದ ವನ್ಯಜೀವಿ ವ್ಯಾಖ್ಯಾನ ಕೇಂದ್ರ ವೀಕ್ಷಣೆಗೆ ವಯಸ್ಕರಿಗೆ 10 ರೂ., ಮಕ್ಕಳಿಗೆ 5 ರೂ. ನಿಗಧಿ ಪಡಿಸಲಾಗಿದ್ದು, ಶಾಲಾ-ಕಾಲೇಜುಗಳ ಮಕ್ಕಳು ಗುಂಪಿನಲ್ಲಿ ಬಂದರೆ ಅವರಿಗೆ ರಿಯಾಯಿತಿ ದರದಲ್ಲಿ ಪ್ರವೇಶ ಕಲ್ಪಿಸುವ ಅಲೋಚನೆ ಮಾಡಲಾಗಿದೆ. ಬೆಳಿಗ್ಗೆ 6 ರಿಂದ 9 ಹಾಗೂ ಸಂಜೆ 6 ರಿಂದ ೮ರ ವರೆಗೆ ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಉಚಿತ ಪ್ರವೇಶ ಮುಂದುವರೆದಿದೆ ಎಂದರು.
5 ಕೃತಕ ನೀರಿನ ಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸಲಾಗಿದೆ. 2 ಬೋರ್‌ವೆಲ್ ಮೂಲಕ ಇವುಗಳಿಗೆ ನೀರು ಸರಬರಾಜು ಮಾಡಿ ಉದ್ಯಾನವನದಲ್ಲಿರುವ ಗಿಡಗಂಟಿಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರುಣಿಸಲಾಗುವುದು ಎಂದ ಅವರು, ಉದ್ಯಾನದಲ್ಲಿ 32 ಸಿಸಿ ಕ್ಯಾಮೇರಾಗಳನ್ನು ಅಳವಡಿಸಲಾಗಿದ್ದು, ಇನ್ನು ಮುಂದೆ ಇಡೀ ಉದ್ಯಾನವನ ಸಿಸಿ ಕಣ್ಗಾವಲಿನಲ್ಲಿ ಇರಲಿದೆ. ಸಾರ್ವಜನಿಕರು ಉದ್ಯಾನವನದ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಇನ್ನೊಂದು ಮೂರ್‍ನಾಲ್ಕು ಪ್ರಮುಖ ಕಾಮಗಾರಿಗಳು ಪೂರ್ಣಗೊಳ್ಳುವುದು ಬಾಕಿ ಇದ್ದು, ಒಂದೆರೆಡು ತಿಂಗಳಲ್ಲಿ ಅವುಗಳು ಕೂಡ ಪೂರ್ಣಗೊಳ್ಳಲಿವೆ. ಒಟ್ಟಾರೆ ಮಹಾತ್ಮಾಗಾಂಧಿ ಉದ್ಯಾನವನಕ್ಕೆ ಸಂಬಂಧಿಸಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಉಪ ಆಯುಕ್ತ ತುಷಾರ್ ಹೊಸೂರ್, ಎಇಇಗಳಾದ ಪ್ರಿಯಾ ಹಾಗೂ ಲಕ್ಷ್ಮೀ ಉಪಸ್ಥಿತರಿದ್ದರು.