
ಶಿವಮೊಗ್ಗ :- ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು, ಫೆ. 24ರಿಂದ 28ರವರೆಗೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ತಿಳಿಸಿದರು.
ಅವರು ಇಂದು ದೇವಸ್ಥಾನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ಕೋಟೆ ಮಾರಿಕಾಂಬ ದೇವಸ್ಥಾನವು ಇತಿಹಾಸ ಪ್ರಸಿದ್ಧವಾಗಿದೆ. ಕೆಳದಿ ಶಿವಪ್ಪನಾಯಕ ಅರಸರ ಕಾಲದಿಂದಲೂ ಈ ಹಬ್ಬ ಇಂದಿನವರೆಗೆ ಪ್ರತೀ ಎರಡು ವರ್ಷಕ್ಕೊಮ್ಮೆ ಅತ್ಯಂತ ಸಡಗರ-ಸಂಭ್ರಮದಿಂದ ಭಾವೈಕ್ಯತೆಯಿಂದ ಎಲ್ಲಾ ಸಮಾಜದ ಸಹಕಾರದೊಂದಿಗೆ ಆಚರಿಸುತ್ತಾ ಬಂದಿದ್ದು, ರಾಜ್ಯದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿದೆ ಎಂದರು.
ಗಾಂಧಿಬಜರಿನಲ್ಲಿ ಅಮ್ಮನವರನ್ನು ಪ್ರತಿಷ್ಠಾಪನೆ ಮಾಡಿದಾಗ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲಿ ಜಗ ತುಂಬಾ ಕಡಿಮೆ ಇರುವುದರಿಂದ ನೂಕು-ನುಗ್ಗಲು ಆಗದಂತೆ ಎಚ್ಚರಿಕೆ ವಹಿಸಲಾಗುವುದು. ಅಂಗವಿಕಲರಿಗೆ, ವಯಸ್ಸಾದವರಿಗೆ ವಿಶೇಷ ಮಾರ್ಗವನ್ನು ಕಲ್ಪಿಸಲಾಗುವುದು. ಭಕ್ತಾಧಿಗಳಿಗೆ ಮಡಿಲಕ್ಕಿ, ಸೀರೆ ತೆಗೆದುಕೊಳ್ಳಲು ವ್ಯವಸ್ಥಿತವಾಗಿ ಅವಕಾಶ ಕಲ್ಪಿಸಲಾಗುವುದು. ಎಲ್ಲಾ ಕಡೆ ಸಿಸಿ ಟಿ.ವಿಯನ್ನು ಅಳವಡಿಸಲಾಗುವುದು ಎಂದರು.
ಬುಧವಾರ ಬೆಳಿಗ್ಗೆ 4ಗಂಟೆಗೆ ಹರಿಜನ ಸಮಾಜದವರು ಅಂದರೆ ವಿದ್ಯಾನಗರದ ಕರ್ಲಟ್ಟಿ ಬಾಂಧವರು ಬೇವಿನುಡಿಗೆಯೊಂದಿಗೆ ಆಗಮಿಸಿ, ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಯಲ್ಲಿ ಕೂರಿಸಲಾಗುತ್ತದೆ. ನಂತರ ಕುರುಬ ಸಮಾಜದ ಚೌಡಿಕೆ ಕುಟುಂಬದವರು ದೇವಿಗೆ ನೈವೇದ್ಯಮಾಡಿ ಪೂಜೆ ಸಲ್ಲಿಸುತ್ತಾರೆ. ಅಂದು ಬೆಳಿಗ್ಗೆ ೬ ರಿಂದ ರಾತ್ರಿ 10.30ರ ವರೆಗೂ ವಾಲ್ಮೀಕಿ, ಉಪ್ಪಾರ, ಮಡಿವಾಳ ಸಮಾಜದವರು ಪೂಜೆ ಸಲ್ಲಿಸುತ್ತಾರೆ. ಈ ಪೂಜೆಯು ಸರದಿಯಂತೆ ನಾಲ್ಕು ದಿನಗಳ ಕಾಲವೂ ನಡೆಯುತ್ತದೆ ಎಂದರು.
ಫೆ.28ರ ರಾತ್ರಿ 7ಗಂಟೆಗೆ ಶ್ರೀ ಮಾರಿಕಾಂಬೆಯ ಉತ್ಸವ ವಿವಿಧ ಜನಪದ ಕಲಾತಂಡಗಳ ಮೆರಗಿನೊಂದಿಗೆ ಲಕ್ಷಾಂತರ ಜನರ ಮತ್ತು ಭಕ್ತರ ಅತ್ಯಂತ ಸಂಭ್ರಮದಿಂದ ವನಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ಎರಡು ವರ್ಷಕ್ಕೊಮ್ಮೆ ನಡೆಯುವ ಜತ್ರೆಗೆ ತೆರೆ ಎಳೆಯಲಾಗುತ್ತದೆ. ಮಡಿವಾಳ ಸಮಾಜದವರು ಅಮ್ಮನವರನ್ನು ಮಧ್ಯರಾತ್ರಿ ವನಕ್ಕೆ ತೆಗೆದುಕೊಂಡು ಹೋಗಿ ಅಂತಿಮವಾಗಿ ಸಮಾಜದ ಸಂಪ್ರದಾಯದಂತೆ ಶಾಸ್ತ್ರವನ್ನು ನಡೆಸಿ, ಪೂಜೆ ಸಲ್ಲಿಸಿ ವನದಿಂದ ಹಿಂದಿರುಗುತ್ತಾರೆ ಎಂದು ಹಬ್ಬದ ವಿಶೇಷತೆಗಳನ್ನು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಮತ್ತಷ್ಟು ವಿವರಣೆ ನೀಡಿ, ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬದ ಹಿನ್ನಲೆಯಲ್ಲಿ ಫೆ. 24ರಿಂದ 27ರ ವರೆಗೆ ಈ ಬಾರಿ ಗಾಂಧಿಬಜರಿನ ರಾಮಣ್ಣ ಶ್ರೇಷ್ಠಿ ಪಾರ್ಕಿನಲ್ಲಿ ಪ್ರತಿದಿನ ಸಂಜೆ ೫ರಿಂದ 9.30ರ ವರೆಗೂ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.24ರಂದು ಶಿವಮೊಗ್ಗದ ಝೇಂಕಾರ್ ಮೇಲೋಡೀಸ್‌ನಿಂದ ಸುಗಮ ಸಂಗೀತ, ಫೆ. 28ರಂದು ಮನು ಕಲಾಕೇಂದ್ರದವರಿಂದ ಭರತನಾಟ್ಯ, ಶಾಂತ ಆನಂದ್ ಅವರಿಂದ ಸುಗಮ ಸಂಗೀತ, 28ರಂದು ಕೂಡ ಶ್ವೇತಾ ಪ್ರಕಾಶ್ ಮತ್ತು ನಾಗರತ್ನ ಸಂಗಡಿಗರಿಂದ ಕಾರ್ಯಕ್ರಮ ವಿಶೇಷವಾಗಿ ಫೆ. 27ರಂದು ಸುರೇಖಾ ಹೆಗಡೆ, ಶಶಿಕಿರಣ್ ಹಾಗೂ ದೂರದರ್ಶನ ಕಲಾವಿದರಿಂದ ಸವಿನೆನಪು ಎಂಬ ಹಳೆಯ ಚಿತ್ರಗೀತೆಗಳ ಕಾರ್ಯಕ್ರಮ ನಡೆಯಲಿದೆ ಎಂದರು.
ಇದಾದ ಮೇಲೆ ಮಾರಿಕಾಂಬ ಜತ್ರೆಯ ಪ್ರಯುಕ್ತ ಮಾರ್ಚ್ ೬ರಿಂದ ಮಾರ್ಚ್೮ರ ವರೆಗೆ ನೆಹರೂ ಕ್ರೀಡಾಂಗಣದಲ್ಲಿ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ. ಈ ಪಂದ್ಯಾವಳಿ ರಾಷ್ಟ್ರಮಟ್ಟದ್ದಾಗಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಪೈಲ್ವಾನರುಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಕುಸ್ತಿ ಸಮಿತಿಯನ್ನು ರಚಿಸಲಾಗಿದೆ. ಅವರು ಈ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ ಎಂದರು.
ಈ ಬಾರಿಯ ವಿಶೇಷತೆಗಳೇನು ಗೊತ್ತ…
ಈ ಬಾರಿ ಅಮ್ಮನವರಿಗೆ ಬಂಗಾರದ ಮುಖವಾಡವನ್ನು ತಯಾರಿಸಲಾಗಿದೆ. ಸುಮಾರು 1ಕೆ.ಜಿ. 600ಗ್ರಾಂ ತೂಕದ ಅಮ್ಮನವರ ಮುಖವಾಡವನ್ನು ಈ ಬಾರಿ ಅಮ್ಮನವರಿಗೆ ತೊಡಿಸಲಾಗುವುದು. ಇದರ ಜೊತೆಗೆ ಸುಮಾರು 16 ಕೆ.ಜಿ. ಬೆಳ್ಳಿಯ ಬಾಗಿಲನ್ನು ಗರ್ಭಗುಡಿ ಬಾಗಿಲಿಗೆ ಜೋಡಿಸಲಾಗುವುದು. ಇದು ಅಮ್ಮನವರನ್ನು ಕಣ್ತುಂಬಿಕೊಳ್ಳಲು ಕಾರಣವಾಗುತ್ತದೆ. ಅಷ್ಟೇ ಅಲ್ಲ, ಯಾವ ಭಕ್ತಾದಿಗಳಿಗೂ ಸರತಿಸಾಲಿನಲ್ಲಿ ನಿಲ್ಲುವಾಗ ಬಿಸಿಲಿನಿಂದ ಬಳಲುಬಾರದು ಎಂಬ ಕಾರಣಕ್ಕಾಗಿ ಶಿವಪ್ಪನಾಯಕ ಮಹದ್ವಾರದಿಂದ ಮತ್ತು ಕರ್ನಾಟಕ ಸಂಘದ ಬಳಿಯಿಂದ ಜರ್ಮನ್ ಟೆಂಟ್ ಹಾಕಲಾಗುವುದು. ಶಾಮೀಯಾನ ಕೂಡ ಹಾಕಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ಎನ್. ಉಮಾಪತಿ, ಎಂ.ಕೆ. ಸುರೇಶ್‌ಕುಮಾರ್, ಕೋಶಾಧ್ಯಕ್ಷ ಹೆಚ್.ವಿ. ತಿಮ್ಮಪ್ಪ, ಕಾರ್ಯದರ್ಶಿಗಳಾದ ಎಸ್. ಹನುಮಂತಪ್ಪ, ಡಿ.ಎಂ. ರಾಮಯ್ಯ, ಎಸ್.ಸಿ. ಲೋಕೇಶ್, ಸಹಕಾರ್ಯದರ್ಶಿಗಳಾದ ಸೀತಾರಾಮ್‌ನಾಯಕ್, ಎ.ಹೆಚ್. ಸುನೀಲ್, ಟಿ.ಎಸ್. ಚಂದ್ರಶೇಖರ್, ಪೂಜ ಸಂಚಾಲಕರುಗಳಾದ ಸತ್ಯನಾರಾಯಣ್, ಪಿ.ಸಿ. ಲಿಂಗರಾಜ್, ಎಸ್.ಜಿ. ಪ್ರಭಾಕರ್, ನಿರ್ದೇಶಕರುಗಳಾದ ಎನ್. ಶ್ರೀಧರಮೂರ್ತಿ ನವುಲೆ, ಎಲ್. ಚಂದ್ರಶೇಖರ್, ವಿ.ರಾಜು, ಹೆಚ್.ಬಿ. ಪ್ರಕಾಶ್, ಹೆಚ್.ಟಿ. ವಾಸುದೇವ್, ಎಸ್.ಜಿ. ತುಕ್ಕೋಜಿರಾವ್, ಎನ್. ಶ್ರೀಧರ್ ನಾಡಿಗ್, ಎಸ್. ಶಿವು, ಎಸ್.ಸುಧೀರ್, ಸೋಮಶೇಖರ್ ನಾಡಿಗ್, ಹರೀಶ್‌ಲಾಲ್, ಪ್ರಮುಖರಾದ ಕೆ.ವಿ. ಅಣ್ಣಪ್ಪ, ಮಂಜುನಾಥ್‌ಬಾಬು ಸೇರಿದಂತೆ ಹಲವರಿದ್ದರು.
ಸಂಪ್ರದಾಯದಂತೆ ‘ಸಾರು (ಡಂಗುರ) ಹಾಕಲಾಯಿತು

ಫೆ. 24ರಿಂದ ಆರಂಭವಾಗುವ ಕೋಟೆ ಶ್ರೀ ಮಾರಿಕಾಂಬ ಜತ್ರೆಯ ಹಿನ್ನಲೆಯಲ್ಲಿ ಇಂದು ದೇವಿಗೆ ಪೂಜೆ ಪುನಸ್ಕಾರ ನಡೆಸಿ, ಸಂಪ್ರದಾಯದಂತೆ ‘ಸಾರು (ಡಂಗುರ) ಹಾಕಲಾಯಿತು. ಈ ಸಂದರ್ಭದಲ್ಲಿ ಸುಮಾರು ಆರು ಆಟೋಗಳು ನಗರದೆಲ್ಲೆಡೆ ಇಂದಿನಿಂದ ಡಂಗುರು ಸಮೇತ ಪ್ರಚಾರ ಕೈಗೊಳ್ಳಲು ಹೊರಟವು. ಈ ಸಂದರ್ಭದಲ್ಲಿ ತಮಟೆ ಭಾರಿಸುವ ಮೂಲಕ ಚಾಲನೆ ನೀಡಲಾಯಿತು.