
ಶಿವಮೊಗ್ಗ :- ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಸಮಿತಿಯು ಇಂದು ಜಾತ್ರೋತ್ಸವ ಹಿನ್ನಲೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಸಂಪೂರ್ಣ ವಿವರ ನೀಡಿತು.
ಫೆ. 24ರಿಂದ 28ರವರೆಗೆ ನಡೆಯುವ ಉತ್ಸವದಲ್ಲಿದೇವಿಗೆ ಪೂಜಾ ವಿಧಿ ವಿಧಾನಗಳು, ಅಲಂಕಾರ, ಭದ್ರತೆ, ಮಳಿಗೆಗಳ ಹರಾಜು, ದೇವಸ್ಥಾನದ ಆವರಣದಲ್ಲಿ ಹಿಂದೆಂದು ಕಂಡರಿಯದ ನೂರಾರು ರೀತಿಯ ಹೂವು-ಹಣ್ಣುಗಳ ಮಿಶ್ರಿತ ಅಲಂಕಾರ ಮತ್ತು ಸಾರ್ವಜನಿಕರ ವೀಕ್ಷಣೆ ಸೇರಿದಂತೆ ಹತ್ತು ಹಲವು ಸಿದ್ಧತೆಗಳ ಬಗ್ಗೆ ಇಂದು ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಕಾರ್ಯದರ್ಶಿ ಎನ್. ಮಂಜುನಾಥ್ ಜಂಠಿಯಾಗಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಜಾತ್ರೆಯಲ್ಲಿ ನೀರಿನ ವ್ಯವಸ್ಥೆಗೆ ವಾಟರ್ ಬೋರ್ಡ್, ಮಹಾನಗರ ಪಾಲಿಕೆ ಸ್ವಚ್ಛತೆ ಕಾರ್ಯ, ಪೊಲೀಸ್ ಇಲಾಖೆಯ ಭದ್ರತೆ ಜೊತೆಗೆ ಮತ್ತಿತರ ಇಲಾಖೆಯವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಸೈನ್ಸ್ ಮೈದಾನ, ಸೆಕ್ರೆಟ್ ಹಾರ್ಟ್ ಚರ್ಚ್ ಹಾಗೂ ವಾಸವಿ ಶಾಲೆಯ ಆವರಣದಲ್ಲಿ ವಾಹನಗಳ ಪಾರ್ಕ್‌ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ಲಾಸ್ಟಿಕ್ ಮುಕ್ತ ಮಾದರಿ ಜಾತ್ರೆಯಾಗಲಿದೆ…
ಈ ಬಾರಿಯ ಶಿವಮೊಗ್ಗ ಅಮ್ಮನ ಜಾತ್ರೆಯಲ್ಲಿ ಪ್ರಸಾದ ವಿತರಣೆಗೆ ಸಂಪೂರ್ಣ ಕಾಗದ ನಿರ್ಮಿತ ಸುಮಾರ 20ಸಾವಿರಕ್ಕೂ ಹೆಚ್ಚು ಬ್ಯಾಗ್‌ನಲ್ಲಿ ಪ್ರಸಾದ ವಿತರಣೆಯಾಗಲಿದ್ದು, ಈ ಮೂಲಕ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಜಾತ್ರೆಯಾಗಲಿದೆ ಎಂದು ಅಧ್ಯಕ್ಷ ಮರಿಯಪ್ಪ ತಿಳಿಸಿದರು.
ಹಿಂದೆಂದೂ ಜನಮನದಲ್ಲಿ ಕಂಡು ಕೇಳರಿಯದ ಅಲಂಕಾರ ಆಕರ್ಷಿಸಲಿದೆ…

ಜನಮನದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಆಕರ್ಷಿತವಾಗಿ ದೇವಸ್ಥಾನದ ಆವರಣದಲ್ಲಿ ಅಲಂಕಾರ ನಡೆಯುತ್ತಿದೆ. ಇದು ಇಂದು ಸಂಜೆಯೊಳಗೆ ಸಂಪೂರ್ಣ ಮುಗಿಯಲಿದೆ. 10ಸಾವಿರಕ್ಕೂ ಹೆಚ್ಚು ವಿಧವಿಧದ ಗುಲಾಬಿ ಸೇರಿದಂತೆ ನೂರಾರು ರೀತಿಯ ವಿಶೇಷ ಹೂವುಗಳೂ ಮತ್ತು ಕಬ್ಬು ಸೇರಿ ಹತ್ತಾರು ರೀತಿಯ ಹಣ್ಣುಗಳಿಂದ ಅಲಂಕಾರಗೊಳ್ಳುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯಲಿದೆ ಎಂದು ಸಮಿತಿ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.
ಅತ್ಯಂತ ಶಾಂತ ರೀತಿಯಲ್ಲಿ ಸಾರ್ವಜನಿಕರು ದೇವಿಯ ದರ್ಶನ ಪಡೆಯಲು ಎರಡು ಸರತಿ ಸಾಲನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕಾಗಿ 15ಉಪ ಸಮಿತಿ ರಚಿಸಲಾಗಿದೆ. ಸರತಿ ಉದ್ದಕ್ಕೂ ವಿವಿಧ ಸಮಾಜ ಬಾಂಧವರು ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ಮತ್ತು ನೀರನ್ನು ವಿತರಿಸಲಿದ್ದಾರೆ ಎಂದ ಅವರು, ತವರು ಮನೆ ಗಾಂಧಿಬಜಾರಿನಲ್ಲಿ ಅಮ್ಮನ ದರ್ಶನಕ್ಕೆ 200 ರೂ. ಮತ್ತು ಮಾರನೇ ದಿನ ಗದ್ದುಗೆಯಲ್ಲಿ ಅಮ್ಮನ ದರ್ಶನಕ್ಕೆ 500ರೂ. ನಿಗದಿಪಡಿಸಲಾಗಿದೆ. ಇದಕ್ಕಾಗಿ ದೇವಸ್ಥಾನದ ಬಳಿಯೇ ಟಿಕೇಟ್ ಕೌಂಟರ್‌ಗಳನ್ನು ನಿರ್ಮಿಸಲಾಗುವುದು. ಗಾಂಧಿ ಬಜಾರಿನಲ್ಲಿ ಮಡಲಕ್ಕಿ, ಕಾಯಿ ಒಡೆಯಲು ಶುಲ್ಕ ಇರುವುದಿಲ್ಲ ಎಂದರು.

ಹಿಂದೆಂದಿಗಿಂತಲೂ ಹೆಚ್ಚು ಜನರು ಸೇರುವ ನಿರೀಕ್ಷೆ : ಇಂಟೆಲಿಜೆನ್ಸಿ ರಿಪೋರ್ಟ್
ಈ ಭಾರಿಯ ಅಮ್ಮನ ಜಾತ್ರೆಗೆ ಹಿಂದೆಂದಿಗಿಂತಲೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಇಂಟೆಲಿಜೆನ್ಸಿಯವರು ತಿಳಿಸಿದ್ದಾರೆ ಎಂದು ಸಮಿತಿ ತಿಳಿಸಿದ್ದು, ದೇವಸ್ಥಾನದ 500 ಮೀಟರ್ ವ್ಯಾಪ್ತಿಯಲ್ಲಿ ೩ಆಂಬುಲೆನ್ಸ್‌ಗಳನ್ನು ಇರಿಸಲಾಗುವುದು. ಮುಖ್ಯವಾಗಿ ಸಿಸಿ ಟಿವಿ ಕಣ್ಗಾವಲು ಎಲ್ಲೆಡೆ ಇರುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಕ್ಷ ಉಮಾಪತಿ, ಪ್ರದಾನ ಕಾರ್ಯದರ್ಶಿ ಲೊಕೇಶ್, ನಿರ್ದೇಶಕರಾದ ಚಂದ್ರಶೇಖರ್, ಹರೀಶ್ ಇನ್ನಿತರರಿದ್ದರು.