
ಶಿವಮೊಗ್ಗ :- ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾವನ್ನು ಅತ್ಯಂತ ವಿಜೃಂಭಣೆಯಿಂದ ಈ ಬಾರಿ ಆಚರಿಸಲಾಗುವುದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಮಹಾನಗರ ಪಾಲಿಕೆ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮೈಸೂರು ದಸರಾ ಬಿಟ್ಟರೆ ಶಿವಮೊಗ್ಗ ದಸರಾ ನಾಡಿನಲ್ಲಿಯೇ ಹೆಸರಾಗಿದೆ. ನಮ್ಮೂರ ಈ ನಾಡಹಬ್ಬವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಅ. 3ರಿಂದ ಅ. 12ರವರೆಗೆ ಆಚರಿಸಲಾಗುವುದು. ಇದಕ್ಕಾಗಿ ಈಗಾಗಲೇ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಸಿದ್ದತೆಗಳನ್ನು ಕೂಡ ಮಾಡಿಕೊಳ್ಳಲಾಗಿದೆ ಎಂದರು.
ಸುಮಾರು ೧೪ ಸಮಿತಿಗಳನ್ನು ಆಯೋಜಿಸಲಾಗಿದೆ. 68ಕ್ಕೂ ಹೆಚ್ಚು ಚಟುವಟಿಕೆ ಕಾರ್ಯಕ್ರಮಗಳು ನಡೆಯಲಿವೆ. 4 ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ವಿಶೇಷವಾಗಿ ಮೆರವಣಿಗೆಯಲ್ಲಿ 3 ಆನೆಗಳು ಕೂಡ ಭಾಗವಹಿಸಲಿವೆ. ಚಲನಚಿತ್ರ ನಟ ನಟಿಯರು ಭಾಗವಹಿಸುತ್ತಾರೆ. ಸಾಂಸ್ಕತಿ ಕಾರ್ಯಕ್ರಮಗಳು ನಡೆಯುತ್ತವೆ. ಜನಪದ ವೈಭವವಿರುತ್ತದೆ. ಸಂಗೀತ ಸಾಹಿತ್ಯ ಕಾರ್ಯಕ್ರಮಗಳು ಕೂಡ ಈ ದಸರಾದಲ್ಲಿ ಮೆಳೈಸಲಿವೆ ಎಂದರು.
ಮುಖ್ಯವಾಗಿ ಹಲವು ವಿಭಾಗಗಳನ್ನು ಮಾಡಲಾಗಿದೆ. ಅ. 3ರಂದು ಸಾಂಸ್ಕತಿಕ ದಸರಾ ಕುವೆಂಪು ರಂಗಮಂದಿರದಲ್ಲಿ ನಡೆಯುತ್ತದೆ. ಅದೇ ದಿನ ಸಂಜೆ ಯಕ್ಷದಸರಾ ಕೂಡ ಇರುತ್ತದೆ. ಅ.4ರಂದು ಮಹಿಳಾ ದಸರಾ ಸಂಜೆ 4.30ಕ್ಕೆ ಕುವೆಂಪು ರಂಗಮಂದಿರದಲ್ಲಿ, ಅದೇ ದಿನ ಬೆಳಿಗ್ಗೆ 9.30ಕ್ಕೆ ದಸರಾ ಚಲನಚಿತ್ರತೋತ್ಸವ, ಅ. 4ರಂದು ಸಂಜೆ 4.30ಕ್ಕೆ ಪತ್ರಕರ್ತರ ದಸರಾ ಅಂಬೇಡ್ಕರ್ ಭವನದಲ್ಲಿ, ಮಕ್ಕಳ ದಸರಾ ಸಮಾರೋಪ ಸಮಾರಂಭ ಅ. 5ರಂದು ಸಂಜೆ 5ಕ್ಕೆ ಅಂಬೇಡ್ಕರ್ ಭವನದಲ್ಲಿ, ಯೋಗ ದಸರಾ ಅ. 6ರಂದು ಬೆಳಿಗ್ಗೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ, ರೈತ ದಸರಾ ಅ. 5ರಂದು ಬೆಳಿಗ್ಗೆ 9ಕ್ಕೆ ಸೈನ್ಸ್ ಮೈದಾನದಲ್ಲಿ ಅದೇ ದಿನ ಬೆಳಿಗ್ಗೆ 10ಕ್ಕೆ ಅಂಬೇಡ್ಕರ್ ಭವನದಲ್ಲಿ ಚಲನಚಿತ್ರ ರಸಗ್ರಹಣ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಅ. 5ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ರಂಗದಸರಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7.30ಕ್ಕೆ ರಂಗಗೀತೆ ಗಾಯನ ತರಬೇತಿ ಮತ್ತು ಪ್ರಸ್ತುತಿ ಕಾರ್ಯಕ್ರಮ ನಡೆಯಲಿದೆ. ಅ. 6ರಂದು ಯುವ ದಸರಾ, ಸಂಜೆ 6ಕ್ಕೆ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಅದೇ ದಿನ ಬೆಳಿಗ್ಗೆ 10.15ಕ್ಕೆ ಕುವೆಂಪು ರಂಗಮಂದಿರದಲ್ಲಿ ಮಕ್ಕಳ ರಂಗ ದಸರಾ ನಡೆಯಲಿದ್ದು, ಇದರ ಅಂಗವಾಗಿ ಮಕ್ಕಳ ನಾಟಕ ಹಾಗೂ ಮಹಿಳಾ ನಿರ್ದೇಶಿತ ನಾಟಕಗಳು ಪ್ರದರ್ಶನವಾಗಲಿವೆ. ಮತ್ತು ಅ. 6ರಂದು ಕಮಲಾ ನೆಹರು ಕಾಲೇಜಿನಲ್ಲಿ ಬೆಳಿಗ್ಗೆ 9ಕ್ಕೆ ಗಮಕ ದಸರಾ ನಡೆಯಲಿದೆ. ಅ.6ರಂದೇ ಬೆಳಿಗ್ಗೆ 7ಕ್ಕೆ ಪರಿಸರ ದಸರಾದ ಅಂಗವಾಗಿ ನೆಹರೂ ಕ್ರೀಡಾಂಗಣದಿಂದ ಸೈಕಲ್ ಜಥಾವಿದೆ. ಅ. 7ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ6ಕ್ಕೆ ಏಕ ವ್ಯಕ್ತಿ ನಾಟಕ ಪ್ರದರ್ಶನವಿದೆ. ಅದೇ ದಿನ ಸಂಜೆ 5ಕ್ಕೆ ಸಿಟಿ ಸೆಂಟರ್ ಮಾಲ್‌ನಲ್ಲಿ ಯುವ ದಸರಾ ಕಾರ್ಯಕ್ರಮವಿದೆ. ಅ.8ರಂದು ಬೆಳಿಗ್ಗೆ 11ಕ್ಕೆ ಕುವೆಂಪು ರಂಗಮಂದಿರದಲ್ಲಿ ಪೌರ ಕಾರ್ಮಿಕ ದಸರಾವಿದೆ. ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ಪೌರಾಣಿಕ ಪ್ರದರ್ಶನವಿದೆ. ಅದೇ ದಿನ ಶಿವಪ್ಪ ನಾಯಕ ಅರಮನೆಯಲ್ಲಿ ಬೆಳಿಗ್ಗೆ ೧೦ಕ್ಕೆ ಕಲಾ ದಸರಾವಿದೆ ಎಂದರು.
ಅ. 9ರಂದು ಫ್ರೀಡಂ ಪಾರ್ಕ್‌ನಲ್ಲಿ ಸಂಜೆ 5ಕ್ಕೆ ಯುವ ದಸರಾ ಕಾರ್ಯಕ್ರಮವಿದ್ದು, ಇದರ ಅಂಗವಾಗಿ ಮ್ಯೂಸಿಕಲ್ ನೈಟ್ ಕಾರ್ಯಕ್ರಮವಿರುತ್ತದೆ. ರಾಜೇಶ್ ಕೃಷ್ಣನ್ ಮತ್ತು ಡಾ. ಶಮೀತಾ ಮಲ್ನಾಡ್ ಸಂಗೀತವಿರುತ್ತದೆ. ಅದೇ ದಿನ ಶಿವಪ್ಪ ನಾಯಕ ಅರಮನೆಯಲ್ಲಿ ಸಂಜೆ 6ಕ್ಕೆ ಕಲಾ ದಸರಾವಿರುತ್ತದೆ. ಅ. 9ರಂದೇ ಬೆಳಿಗ್ಗೆ10.30ಕ್ಕೆ ಆಹಾರ ದಸರಾದ ಅಂಗವಾಗಿ ಇಡ್ಲಿ ಹಾಗೂ ಹಣ್ಣು ತಿನ್ನುವ ಸ್ಪರ್ಧೆ ಮತ್ತು ಅಡಿಗೆ ಮಾಡುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಜನದಸರಾ ಕಾರ್ಯಕ್ರಮವಿದೆ. ಅ. 10ರಂದು ಫ್ರೀಡಂ ಪಾರ್ಕ್‌ನಲ್ಲಿ ನಾಟ್ಯ ವೈವಿದ್ಯೆ ಸಂಗೀತ ಕಾರ್ಯಕ್ರಮವಿದ್ದು, ನಟಿ ಮಾಲಾಶ್ರೀ ಉದ್ಘಾಟಿಸಲಿದ್ದಾರೆ.
ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭವು ಅ. 3ರಂದು ಬೆಳಿಗ್ಗೆ 11ಕ್ಕೆ ಕೋಟೆ ರಸ್ತೆಯ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದ್ದು, ಖ್ಯಾತ ನಿರ್ದೇಶಕ ಸುನೀಲ್‌ಕುಮಾರ್ ದೇಸಾಯಿ ಉದ್ಘಾಟಿಸುವರು. ಸಚಿವ ಮಧುಬಂಗಾರಪ್ಪ ಸೇರಿದಂತ್ತೆ ಜಿಲ್ಲೆಯ ಎಲ್ಲಾ ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅ.12ರಂದು ಮಧ್ಯಾಹ್ನ 2.30ಕ್ಕೆ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ ನಡೆಯಲಿದೆ. ಅಂಲಕೃತ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯಲ್ಲಿ ಅಂಬಾರಿಯನ್ನು ಆನೆಗಳಾದ ಸಾಗರ್, ಬಹದ್ದೂರ್, ಬಾಲಣ್ಣ ಮೂರು ಆನೆಗಳು ಭಾಗವಹಿಸಲಿವೆ.
ಇದೊಂದು ಅತ್ಯಂತ ವಿಜೃಂಭಣೆಯ ಮೆರವಣಿಗೆಯಾಗಲಿದೆ. ಈ ಮೆರವಣಿಗೆಯಲ್ಲಿ ನಗರದ ದೇವಾನುದೇವತೆಗಳು ಪಾಲ್ಗೊಳ್ಳುತ್ತವೆ. ಜಂಬು ಸವಾರಿ ಜೊತೆಗೆ ವಿವಿಧ ಕಲಾತಂಡಗಳು ಭಾಗವಹಿಸಲಿದ್ದು, ಸಿಡಿ ಮದ್ದು ಪಟಾಕಿ ಪ್ರದರ್ಶನ ನಡೆಯಲಿದೆ. ಎಂದಿನಂತೆ ತಹಶೀಲ್ದಾರ್ ಬಿ.ಎನ್. ಗಿರೀಶ್‌ರವರು ಅಂಬುಕಡೆಯಲಿದ್ದಾರೆ. ಸಂಜೆ 5ಕ್ಕೆ ಸುರೇಖಾ ಹೆಗಡೆಯವರಿಂದ ಸಂಗೀತ ಕಾರ್ಯಕ್ರಮ ಕೂಡ ಇರುತ್ತದೆ ಎಂದರು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಅತ್ಯಂತ ಸಂಭ್ರಮದಿಂದ ಭಾಗವಹಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಕೋರಿದರು. ಪತ್ರಿಕಾಗೋಷ್ಟಿಯಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಉಪ ಆಯುಕ್ತ (ಆಡಳಿತ) ಕೆ. ಲಿಂಗೇಗೌಡ ಇದ್ದರು.