ಸಾಗರ : ಯೋಜನೆ ಕುರಿತು ಜನರಿಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಸಾಧಕ ಬಾಧಕಗಳ ಕುರಿತು ಬಹಿರಂಗ ಚರ್ಚೆ ನಡೆಸಿ. ಸಭೆಯಲ್ಲಿ ಬರುವ ನಿರ್ಣಯಕ್ಕೆ ಎಲ್ಲರೂ ತಲೆಬಾಗೋಣ. ಸಾರ್ವಜನಿಕ ನ್ಯಾಯದ ಮೇಲೆ ಯೋಜನೆ ಕೈಗೊಳ್ಳಬೇಕೆ ವಿನಃ, ಎಸಿ ರೂಮಿನಲ್ಲಿ ನೀವು ಕುಳಿತು ರೂಪಿಸುವ ಯೋಜನೆಗೆ ಬೆಲೆ ಇಲ್ಲ ಎಂದು ಬಂಗಾರಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಹೇಳಿದರು.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದ 6ನೇ ದಿನದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಮುಳುಗಡೆ ಸಂತ್ರಸ್ತರಿಗೆ ನೀಡಿದ ಭರವಸೆಯನ್ನೇ ಈತನಕ ಈಡೇರಿಸದ ಸರ್ಕಾರ ಈಗ ಪಂಪ್ಡ್ ಸ್ಟೋರೇಜ್ ಹೆಸರಿನಲ್ಲಿ ನೂರಾರು ಕುಟುಂಬಗಳನ್ನು ಮತ್ತೊಮ್ಮೆ ಒಕ್ಕಲೆಬ್ಬಿಸಲು ಮುಂದಾಗುತ್ತಿದೆ. ಮೊದಲೇ ನಿರ್ಣಯ ಕೈಗೊಂಡು, ಯೋಜನೆ ಕಾರ್ಯರೂಪಕ್ಕೆ ಇಳಿಸುವ ಅಗತ್ಯ ಸಿದ್ದತೆ ಮಾಡಿಕೊಂಡು ನೆಪಮಾತ್ರಕ್ಕೆ ಜನಾಭಿಪ್ರಾಯ ಸಂಗ್ರಹ ಮಾಡುತ್ತಿರುವುದು ಹಿಟ್ಲರ್ ಧೋರಣೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹದ್ದಕ್ಕೆ ಅವಕಾಶ ಕೊಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ನೂರಾರು ಅಡಿ ಸುತ್ತಳತೆಯ ಸುರಂಗ ಮಾರ್ಗ ಕೊರೆದಾಗ ಗುಡ್ಡ ಕುಸಿತ ಸಂಭವಿಸುವ ಸಾಧ್ಯತೆ ಇದೆ. ಸುರಂಗ ತೆಗೆದಾಗ ಹೊರಬರುವ 20 ದಶಲಕ್ಷ ಟನ್‍ಗಿಂತ ಹೆಚ್ಚು ಮಣ್ಣು ಹಾಕಲು ಗೇರುಸೊಪ್ಪ, ನಗರಸಬಸ್ತಿ ಸೇರಿ ಎಂಟು ಕಡೆ ಜಾಗ ಗುರುತಿಸಿದ್ದಾರೆ. ನದಿಪಾತ್ರದಲ್ಲಿ ಜೀವನ ಮಾಡುವ ಜನರ ಬದುಕು ನಾಶ ಮಾಡಲು ಹೊರಟಿರುವ ಅತ್ಯಂತ ಮಾರಕ ಯೋಜನೆ ಪಂಪ್ಡ್ ಸ್ಟೋರೇಜ್ ಆಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಜೊತೆ ವೇದಾವತಿ ನದಿಗೂ ಪಂಪ್ಡ್ ಸ್ಟೋರೇಜ್ ಮಾಡಲು 22ಸಾವಿರ ಕೋಟಿ ರೂ. ಬಜೆಟ್ ಯೋಜನೆ ರೂಪಿಸಲಾಗುತ್ತಿದೆ. ಒಟ್ಟಾರೆ ಇವರ ದುರಾಸೆಗಾಗಿ ನದಿಗಳ ಪರಿಸರ ಹಾಳಾಗುವ ಜೊತೆಗೆ ನದಿಪಾತ್ರದ ಜನರ ಬದುಕು ಸಹ ನಾಶವಾಗುತ್ತಿದೆ ಎಂದು ತಿಳಿಸಿದರು.
ಎರಡು ಸಾವಿರ ಮೆ.ವ್ಯಾ. ವಿದ್ಯುತ್ ಒಯ್ಯಲು ಅಪಾರ ಪ್ರಮಾಣದ ಕಾಡು, ಜನವಸತಿ ಪ್ರದೇಶ, ರೈತರ ಜಮೀನು ನಾಶವಾಗುತ್ತದೆ. ಈಗಾಗಲೆ ಲೈನ್ ಎಳೆಯಲು ಸೆಂಟ್ರಲ್ ಎಲೆಕ್ಟ್ರಿಕಲ್ ಬೋರ್ಡ್ ಈತನಕ ಅನುಮತಿ ಕೊಟ್ಟಿಲ್ಲ. ಕೆಪಿಸಿಎಲ್ ಮತ್ತೊಮ್ಮೆ ಪರವಾನಿಗೆಗೆ ಕಳಿಸುತ್ತದೆ. ಕೇಂದ್ರದ ಎಲ್ಲ ಒಪ್ಪಿಗೆ ಸಿಗುವವರೆಗೂ ನೀವು ಸರ್ವೇ ಇನ್ನಿತರೆ ಕೈಗೊಳ್ಳಲು ಸಾಧ್ಯವೇ ಇಲ್ಲ. ನೀವು ಕಾನೂನು ಮೀರಿ ಸರ್ವೇ ಇನ್ನಿತರೆ ಕೈಗೊಂಡರೆ ನಾವು ನ್ಯಾಯಾಲಯಕ್ಕೆ ಹೋಗುವುದು ನಿಶ್ಚಿತ. ಜನರ ಆಶೋತ್ತರಗಳಿಗೆ ವಿರುದ್ದವಾಗಿ ನೀವು ಯೋಜನೆ ರೂಪಿಸಿದರೆ ಉಗ್ರವಾದ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಿನೇಶ್ ಶಿರವಾಳ, ಮಲ್ಲಿಕಾರ್ಜುನ ಹಕ್ರೆ, ತೀ.ನ.ಶ್ರೀನಿವಾಸ್, ವ.ಶಂ.ರಾಮಚದ್ರ ಭಟ್, ರಮೇಶ್ ಕೆಳದಿ, ಭದ್ರೇಶ್ ಇನ್ನಿತರರು ಹಾಜರಿದ್ದರು.