google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಅರಣ್ಯ ಅಧಿಕಾರಿಗಳು ಸಾಗುವಳಿ ಪಡೆದ ಜಮೀನನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಹೊಳೆಹೊನ್ನೂರು ಹೋಬಳಿಯ ಅರಣ್ಯ ಹಕ್ಕು ಸಮಿತಿ ಮತ್ತು ಬಗರ್‌ಹುಕುಂ ಸಾಗುವಳಿದಾರರು ಹಾಗೂ ರೈತ ಪರ ಸಂಘಟನೆಗಳಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಮೀನಿನಲ್ಲಿ ಕಳೆದ ೪೦ ವರ್ಷಗಳಿಂದ ರೈತರು ಉಳುಮೆ ಮಾಡುತ್ತ ಬಂದಿದ್ದು, ಫಾರಂ ನಂ. ೫೦ ಮತ್ತು ೫೩ರ ಅಡಿಯಲ್ಲಿ ಸಾಗುವಳಿ ಪತ್ರ ಮಂಜೂರಾತಿ ಪಡೆದು ಖಾತೆ ಮತ್ತು ಪಹಣಿಯನ್ನು ಪಡೆದಿರುತ್ತಾರೆ. ಆದರೆ ಇತ್ತೀಚೆಗೆ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳು ಜಮೀನನ್ನು ತೆರವುಗೊಳಿಸಬೇಕು ಎಂದು ನೋಟೀಸ್ ಜರಿ ಮಾಡಿದ್ದಾರೆ. ರೈತರು ಸೂಕ್ತ ದಾಖಲೆಗೊಂದಿಗೆ ತಮ್ಮ ಜಮೀನನ್ನು ರಕ್ಷಣೆ ಮಾಡಿಕೊಳ್ಳಲು ಹೋದಲ್ಲಿ ಅರಣ್ಯಾಧಿಕಾರಿಗಳು ರೈತರ ವಿರುದ್ಧ ಶ್ರೀಗಂಧ, ಬೀಟೆ, ಸಾಗವಾನಿ ಇತರ ಬೆಲೆಬಾಳುವ ಮರಗಳನ್ನು ಕಡಿತಲೆ ಮಾಡಿ ಅರಣ್ಯ ನಾಶ ಮಾಡಿದ್ದಾರೆ ಎಂದು ಸುಳ್ಳು ಕೇಸು ಹಾಕಿ ಜೈಲಿಗೆ ಕಳಿಸುತ್ತೇವೆ ಎಂದು ಬೆದರಿಸಿ ಅವಾಚ್ಯ ಶಬ್ಧಗಳಿಂದ ನಿಂಧಿಸಿ ರೈತರು ಬೆಳೆದ ಅಡಿಕೆ ತೆಂಗು ಬೆಳೆಗಳನ್ನು ನಾಶ ಮಾಡಿ ದೊಡ್ಡ ಯಂತ್ರಗಳನ್ನು ಬಳಸಿ ಕಾಲುವೆಯನ್ನು ನಿರ್ಮಿಸುತ್ತಿದ್ದಾರೆ.

೧೯೯೦ರಲ್ಲಿ ಫಾರಂ ನಂ. ೫೦ ಮತ್ತು ೯೮ರಲ್ಲಿ ಫಾರಂ. ನಂ. ೫೩ಯನ್ನು ಪ.ಜ.ಪ.ಪಂ. ಬಡರೈತರಿಗೆ ಸರ್ಕಾರದಿಂದ ಹಂತ ಹಂತವಾಗಿ ಸಾಗುವಳಿ ಪತ್ರ, ಖಾತೆ ಪಹಣಿ ನೀಡಿದ್ದು, ಅನೇಕ ವರ್ಷಗಳಿಂದ ಜಮೀನನ್ನು ಉಳುಮೆ ಮಾಡಿಕೊಂಡು ತೋಟದ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತ ಬಂದಿದ್ದಾರೆ. ಬೋರ್‌ವೆಲ್ ಕೊರೆಸಿದ್ದಾರೆ. ಸರ್ಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ೪೦ ವರ್ಷ ಸಾಗುವಳಿ ಮಾಡಿದ ದಾಖಲೆಗಳಿವೆ. ಆದರೂ ಬಲವಂತವಾಗಿ ಒಕ್ಕಲೆಬ್ಬಿಸುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸಾಗುವಳಿ ರೈತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಶಾಸಕರಾದ ಶಾರದಪೂರ್‍ಯನಾಯ್ಕ ಅವರು ಮಾತನಾಡಿ, ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಹೋಬಳಿ, ಮಲ್ಲೀಗೇನಹಳ್ಳಿ ಗ್ರಾಮದ ಧನಗಳ ಮುಪತ್ತು, ಸರ್ಕಾರಿ ಜಮೀನನ್ನು ಏಕಾ ಏಕಿ ಅರಣ್ಯ ಭಾಗವೆಂದು ಸಾಗುವಳಿದಾರರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸುತ್ತೇವೆ. ಮಂಜೂರಾತಿ ಪೂರ್ವದಲ್ಲಿ ಮಾಡಿದ ಬಗರ್‌ಹುಕುಂ ಪಟ್ಟಿ ನಕಾಶೆ ಎಲ್‌ಎನ್‌ಡಿ ಆದೇಶ ಪ್ರತಿ, ಸಾಗುವಳಿ ಚೀಟಿ, ಮ್ಯೂಟೇಷನ್ ಮತ್ತು ಖಾತೆ, ಪಹಣಿ ಇದ್ದರೂ ಕೂಡ ರೈತರಿಗೆ ಅನ್ಯಾಯ ಮಾಡುತ್ತಿದ್ದು, ಈ ಬಗ್ಗೆ ಸರ್ಕಾರ ಕೂಡಲೇ ಸೂಕ್ತ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಶಿವಪ್ಪನಾಯಕ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮನವಿ ಸಂದರ್ಭದಲ್ಲಿ ಶಾಸಕ ಧನಂಜಯಸರ್ಜಿ, ಪ್ರಮುಖರಾದ ತಿ.ನಾ. ಶ್ರೀನಿವಾಸ್, ರೈತ ಸಂಘದ ಹೆಚ್.ಆರ್. ಬಸವರಾಜಪ್ಪ, ವಕೀಲ ಚಂದ್ರೇಗೌಡ, ಕಾಂತರಾಜ್, ಬಿ.ಎನ್. ರಾಜು, ಗೀತಾಸತೀಶ್, ಮೋಹನ್, ಜಗದೀಶ್ ಗೌಡ, ಗುರೇಮಟ್ಟಿ ಮಲ್ಲಯ್ಯ ಹಾಗೂ ಹೊಳೆಹೊನ್ನೂರು ಭಾಗದ ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *