ಶಿವಮೊಗ್ಗ :-ಪವಿತ್ರವಾದ ಶ್ರದ್ಧಾ ಕೇಂದ್ರಗಳಾಗಿರುವ ಹಿಂದೂ ಧಾರ್ಮಿಕ ಮತ್ತು ತೀರ್ಥಕ್ಷೇತ್ರಗಳನ್ನು ಸರ್ಕಾರದ ದಬ್ಬಳಿಕೆ ಮತ್ತು ನಿಯಂತ್ರಣಗಳಿಂದ ಮುಕ್ತಗೊಳಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಶಾಖೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ದೇಶದ ಕೋಟ್ಯಾಂತರ ಹಿಂದೂಗಳಿಗೆ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವ ಲಾಡುಗಳ ಬಗ್ಗೆ ಹಾಗೂ ಮಹಾಪ್ರಸಾದದ ಶುದ್ಧತೆ ಮತ್ತು ಪರಿಪೂರ್ಣತೆಯ ಮೇಲೆ ಅನಾಧಿಕಾಲದಿಂದಲೂ ಅಪಾರ ನಂಬಿಕೆ ಇದೆ. ಆದರೆ ಇತ್ತೀಚೆಗೆ ಹಸುವಿನ ತುಪ್ಪದ ಬದಲು ಗೋಮಾಂಸದ ಕಬ್ಬು, ಹಂದಿ ಚರ್ಮದ ಕೊಬ್ಬು ಮತ್ತು ಮೀನಿನ ಎಣ್ಣೆ ಸೇರಿಸುತ್ತಾರೆ ಎಂಬ ವಿಷಯ ಸಾರ್ವಜನಿಕವಾದ ವಿರೋಧವನ್ನು ಎದುರಿಸುತ್ತಿದೆ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದ ರೊಚ್ಚಿಗೆದ್ದಿರುವ ವಿವಿಧ ಸಂತರು, ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ಭಕ್ತಾಧಿಗಳು ತಮ್ಮ ಕೋಪವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಈ ಧರ್ಮ ವಿರೋಧಿ ಕಾರ್ಯದಲ್ಲಿ ಭಾಗಿಯಾಗಿರುವವರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಶಂಕೆಯಲ್ಲಿದ್ದಾರೆ.
ಈ ಪವಿತ್ರ ಯಾತ್ರ ಸ್ಥಳವನ್ನು ಆಂಧ್ರಪ್ರದೇಶದ ಸರ್ಕಾರದ ನಿಯೋಜಿತ ಆಡಳಿತ ಮಂಡಳಿ ನಿರ್ವಹಿಸುತ್ತಿದೆ. ಮಹಾಪ್ರಸಾದದ ತಯಾರಿಕೆಯ ವಿಷಯದಲ್ಲಿ ಧಾರ್ಮಿಕ ಹಕ್ಕುಗಳ ಮೇಲೆ ಕುಮ್ಮಕ್ಕು ಮಾಡಿವೆ. ಈ ದೇವಸ್ಥಾನದಲ್ಲಿ ಭಕ್ತಾಧಿಗಳು ಭಕ್ತಿಯಿಂದ ದೇವರಿಗೆ ಅರ್ಪಿಸುವ ದೇಣಿಗೆ ಮತ್ತು ಕಾಣಿಕೆಗಳ ದುರುಪಯೋಗವಾಗುತ್ತಿದ್ದು, ಸರ್ಕಾರದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಹುಂಡಿ ಹಣವನ್ನು ಧರ್ಮದ ವಿರುದ್ಧ ಬಳಸುತ್ತಿರುವುದು ನೋವು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ತಕ್ಷಣವೇ ಎಲ್ಲಾ ಹಿಂದೂ ದೇವಾಲಯಗಳನ್ನು ತಮ್ಮ ನಿಯಂತ್ರಣದಿಂದ ಬಿಡುಗಡೆ ಮಾಡಿ ಪ್ರಾದೇಶಿಕ ವ್ಯವಸ್ಥೆಯಡಿಯಲ್ಲಿ ಹಿಂದೂ ಸಂತರು ಮತ್ತು ಭಕ್ತರಿಗೆ ಒಪ್ಪಿಸಲು ಪ್ರೇರಿಪಿಸಲು ದಯಾಪಾಲಿಸಬೇಕು. ತಮ್ಮ ಸಂವಿಧಾನಿಕ ಅಧಿಕಾರವನ್ನು ಬಳಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿ ಮಂದಿರಗಳ ನಿಯಂತ್ರಣವನ್ನು ಭಕ್ತಾಧಿಗಳ ನಿಯಂತ್ರಣಕ್ಕೆ ನೀಡುವ ವ್ಯವಸ್ಥೆಯನ್ನು ಮಾಡುತ್ತೀರ ಎಂಬ ವಿಶ್ವಾಸವಿದೆ ಎಂದು ಮನವಿಯಲ್ಲಿ ಕೋರಲಾಗಿದೆ.
ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಾಸುದೇವ್, ಕಾರ್ಯದರ್ಶಿ ನಾರಾಯಣ ಜಿ. ವರ್ಣೇಕರ್, ನಗರಾಧ್ಯಕ್ಷ ವಿನೋದ್‌ಕುಮಾರ್ ಜೈನ್, ಬಜರಂಗದಳ ಜಿಲ್ಲಾ ಸಂಯೋಜಕ ವಡಿವೇಲು ರಾಘವನ್ ಹಾಗೂ ಪ್ರಮುಖರಾದ ಆನಂದರಾವ್ ಜಧವ್, ಸುನೀತಾ, ನಾಗರಾಜ್, ಶರತ್ ಇನ್ನಿತರರು ಭಾಗವಹಿಸಿದ್ದರು.