google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಅಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಖಾದ್ಯಗಳ ಬಾಣಸಿಗರಾಗಿ ಬದಲಾಗಿದ್ದರು. ಬೆಂಕಿರಹಿತ ಖಾದ್ಯಗಳ ತಯಾರಿಕೆಯಲ್ಲಿ ಮಗ್ನರಾಗಿದ್ದ ವಿದ್ಯಾರ್ಥಿಗಳು, ತಾವೇ ತಯಾರಿಸಿದ ಪಾನಿಪೂರಿ, ಸ್ಯಾಂಡ್‌ವಿಚ್, ಹಣ್ಣಿನ ರಸಾಯನ, ಚಾಕಲೇಟ್, ಪೌಷ್ಟಿಕ ನ್ಯೂಡಲ್ಸ್, ವಿವಿಧ ಬಗೆಯ ಪಾನೀಯಗಳು, ಕಾಳು, ಖಾರ್ನ್ ಮತ್ತು ವಿವಿಧ ಧಾನ್ಯಗಳಿಂದ ಕೂಡಿದ ಖಾದ್ಯಗಳು ಆಹಾರ ಪ್ರಿಯರ ಮನ ಗೆದ್ದಿತು.

ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಸ್ಪಂದನ ಮಹಿಳಾ ವಿಭಾಗದ ಆಶ್ರಯದಲ್ಲಿ ಇಂದು ಏರ್ಪಡಿಸಿದ್ದ ನಿರ್ವಹಣೆ, ಸಾಂಸ್ಕೃತಿಕ ಮತ್ತು ಆಹಾರ ಮೇಳ ಸ್ಪರ್ಧೆಯು ಇಂತಹ ದೃಶ್ಯಕ್ಕೆ ಸಾಕ್ಷಿಯಾಗಿತ್ತು. ಸುಮಾರು ೧೫ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದ ಆಹಾರ ಮೇಳದಲ್ಲಿ, ಕೈಗೆಟುಕುವ ದರದಲ್ಲಿ, ಸಂಪೂರ್ಣ ಡಿಜಿಟಲಿಕರಣದ ಪಾವತಿಯ ಮೂಲಕ ಆಹಾರ ಪ್ರಿಯರಿಗೆ ತಾವು ತಯಾರಿಸಿದ ಖಾದ್ಯಗಳನ್ನು ಉಣಬಡಿಸಿದರು. ಜೊತೆಯಲ್ಲಿ ವಿವಿಧ ನಿರ್ವಹಣಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸುಕರಾಗಿ ಭಾಗವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ನಾಲ್ಕು ಗೋಡೆಗಳ ನಡುವಿನ ಕಲಿಕೆಯ ಹೊರತಾಗಿ ಕೌಶಲ್ಯತೆಯ ಆಧಾರದಲ್ಲಿ ವ್ಯಕ್ತಿತ್ವ ವಿಕಸನಗೊಳ್ಳಲು ಪಠ್ಯೇತರ ಚಟುವಟಿಕೆಗಳು ಅವಕಾಶ ಮಾಡಿಕೊಡಲಿದೆ. ಸಾಮಾಜಿಕ ನೈಪುಣ್ಯತೆ ಪಡೆಯಲು ಪಠ್ಯೇತರ ಚಟುವಟಿಕೆ ಸಹಕಾರಿ. ಭಾರತೀಯರು ವಿಶ್ವದ ವಿವಿಧ ಕಡೆಗಳಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಸಮಾಜದ ಋಣ ತೀರಿಸಲು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಹಂಬಲ ಯುವ ಸಮೂಹದ್ದಾಗಬೇಕು. ಹಿರಿಯರಲ್ಲಿದ್ದಂತೆ ಇಂದಿನ ಯುವ ಸಮೂಹದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಾಮರ್ಥ್ಯ ಕುಂಠಿತಗೊಂಡಿದೆ. ರಸ್ತೆ ಬದಿಯ ಚಾಟ್ಸ್‌ಗಳಿಗಿಂತ ಮೀರಿದ ರುಚಿ ತಾಯಿಯ ಅಡುಗೆಯಲ್ಲಿದೆ ಅನ್ನುವ ಸತ್ಯ ಅರಿಯಿರಿ ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲರಾದ ಪಿ.ಆರ್. ಮಮತ ಮಾತನಾಡಿ, ಅಂಕಗಳೊಂದೆ ಜೀವನದ ಗುರಿಯಾಗಬಾರದು. ಎಷ್ಟೇ ಅಂಕಗಳನ್ನು ಪಡೆದಿದ್ದರೂ ಕೂಡ, ವಿದ್ಯಾರ್ಥಿಗಳು ಕೌಶಲ್ಯತೆಯ ಕೊರತೆಯಿಂದ ಬದುಕಿನ ಗುರಿಯನ್ನು ತಲುಪುವಲ್ಲಿ ಹಿನ್ನಡೆ ಸಾಧಿಸುತ್ತಿದ್ದಾರೆ. ಮೊಬೈಲ್ ಜೀವನವಾಗಿ ಹೋಗಿದೆ. ಒಂಟಿತನಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿರುವುದು ದುರದೃಷ್ಟಕರ. ಇಂತಹ ಅಂಧತ್ವದಿಂದ ಹೊರಬರಲು ಪಠ್ಯೇತರ ಚಟುವಟಿಕೆಗಳು ಸಹಕಾರಿ ಎಂದು ಹೇಳಿದರು.

ಉಪನ್ಯಾಸಕರಾದ ಶ್ರೀಲಲಿತ, ಘನಶ್ಯಾಮ್, ಮಂಜುನಾಥ. ಎನ್, ನಕ್ಷಾ.ಜೆ ಸೇರಿದಂತೆ ಮತ್ತಿತರರಿದ್ದರು. ರೂಪಾ.ಎ.ಸಿ ನಿರೂಪಿಸಿದರು.

Leave a Reply

Your email address will not be published. Required fields are marked *