
ಶಿವಮೊಗ್ಗ :- ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಸೆ. 27 ಮತ್ತು 28ರಂದು ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಐಎಂಎ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಶ್ರೀಧರ್ ಎಸ್. ಇಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಸಂಘದ ಅಮೃತ ಮಹೋತ್ಸವದ ಅಂಗವಾಗಿ ವರ್ಷವಿಡೀ ಹಲವು ಆಯಾಮಗಳಲ್ಲಿ ಸಾರ್ವಜನಿಕರ ಆರೋಗ್ಯವನ್ನು ವೃದ್ಧಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದ ಸಂತೃಪ್ತಿ ಸಂಘಕ್ಕೆ ಇದೆ ಎಂದರು.

ಆಕಾಶವಾಣಿ ಭದ್ರಾವತಿಯ ಮೂಲಕ ಪ್ರತೀಸೋಮವಾರ ಬೆಳಿಗ್ಗೆ 8.45ಕ್ಕೆ ಪ್ರಸಾರವಾಗುವ ನುರಿತ ವೈದ್ಯರಿಂದ ಒಟ್ಟು ೩೪ ಆರೋಗ್ಯ ಉಪನ್ಯಾಸ, ಶಾಲೆಗಳಲ್ಲಿ ಹಾಗೂ ವಿವಿಧ ಸಂಘಗಳಲ್ಲಿ ಸಿಪಿಆರ್ ಶಿಕ್ಷಣ (ಹೃದಯ ಮತ್ತು ಶ್ವಾಸಕೋಶ ಪುನರ್‌ಚೇತನ ಕ್ರಿಯೆ) ಒಟ್ಟು 19, ಐಎಂಎ ಶಿವಮೊಗ್ಗ ಯೂಟ್ಯೂಬ್ ಚಾನಲ್ ಮೂಲಕ ತಜ್ಞವೈದ್ಯರಿಂದ ಆರೋಗ್ಯ ಸಂಬಂಧಿ ಉಪನ್ಯಾಸ ಮತ್ತು ಸಂದರ್ಶನ, ಹೀಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಆರೋಗ್ಯದ ಅರಿವು ಹೆಚ್ಚಿಸುವ ಶ್ರೇಷ್ಠ ಕೆಲಸ ಸಂಘ ಮಾಡಿದೆ ಎಂದರು.
ಸೆ. 27ರ ಬೆಳಿಗ್ಗೆ ಐಎಂಎ ಆವರಣದಿಂದ ವೈದ್ಯ ಸದಸ್ಯರು ಒಗ್ಗೂಡಿ ಹಾಗೂ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ತೋರಿಸಲು ಅಮೃತ ನಡಿಗೆ ಎಂಬ ಜಥಾವು ಹೊರಡಲಿದೆ. ಸಂಜೆ ೬ಗಂಟೆಗೆ ರಾಮನ್ ಸಹೋದರಿಯರಿಂದ ವೀಣಾವಾದನ, ವೈದ್ಯರ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಸೆ.೨೮ರ ಬೆಳಿಗ್ಗೆ ೯ ರಿಂದ ವಿವಿಧ ವಿಷಯಗಳ ಬಗ್ಗೆ ತಜ್ಞರಿಂದ ವೈಜನಿಕ ಗೋಷ್ಠಿಗಳು ನಡೆಯಲಿದ್ದು, ಸಂಜೆ ೬ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಮನೋವೈದ್ಯರು, ಪದ್ಮಶ್ರೀ ಪುರಸ್ಕತರು ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗದ ಪೂರ್ವಾಧ್ಯಕ್ಷರಾದ ಡಾ. ಬಿ.ಎನ್. ಗಂಗಾಧರ್, ನಿಮಾನ್ಸ್ ಸಹಪ್ರಾಂಶುಪಾಲ ಡಾ. ವೈ.ಸಿ. ಜನಾರ್ಧನರೆಡ್ಡಿ, ಐಎಂಎ ರಾಜ್ಯ ಶಾಖೆಯ ಅಧ್ಯಕ್ಷ ಡಾ. ವಿವಿ ಚಿನಿವಾಲರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಡಾ. ಪಿ. ನಾರಾಯಣ್, ಡಾ. ಕೆ.ಆರ್. ರವೀಶ್, ಡಾ. ಕೆ.ಆರ್. ಶ್ರೀಧರ್, ಡಾ. ವಿನಯಾ ಶ್ರೀನಿವಾಸ್, ಡಾ. ವಿಶಾಲಾಕ್ಷಿ ಉಪಸ್ಥಿತರಿದ್ದರು.