
ಶಿವಮೊಗ್ಗ :- ಕ್ರೇನಿಯೋಸಿನೋಸ್ಟೊಸಿಸ್ ಎಂಬ ಅಪರೂಪದ ಖಾಯಿಲೆಯಿಂದ ತಲೆಬುರುಡೆ ವಿರೂಪಗೊಂಡು ಬಳಲುತ್ತಿದ್ದ 9ತಿಂಗಳ ಮಗುವಿನ ತಲೆಬುರುಡೆ ಚಿಪ್ಪನ್ನು ಶಸ್ತ್ರಚಿಕಿತ್ಸೆಯ ಮೂಲಕ ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸರಿಪಡಿಸಿ ಯಶಸ್ವಿಯಾಗಿದ್ದಾರೆ.
ತಲೆಬುರುಡೆಯ ಮೂಳೆಗಳ ಮಧ್ಯೆ ಬಿರುಕುಗಳು ಇರುತ್ತವೆ. ಈ ಬಿರುಕುಗಳು ಅವಧಿಗಿಂತ ಮುಂಚೆ ಕೂಡಿಕೊಂಡರೆ ಈ ಸಂದರ್ಭದಲ್ಲಿ ಬುರುಡೆಯ ಒಂದು ಭಾಗ ಸರಿಯಾಗಿ ಬೆಳವಣಿಗೆಯಾಗುವುದಿಲ್ಲ. ಇದನ್ನೇ ಕ್ರೇನಿಯೋಸಿನೋಸ್ಟೊಸಿಸ್ ಎಂದು ಕರೆಯಲಾಗುತ್ತದೆ. ಕ್ರೇನಿಯೋಸಿನೋಸ್ಟೊಸಿಸ್‌ನಿಂದ ಮಗುವಿನ ತಲೆಬುರುಡೆ ವಿರೂಪವಾಗಿರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಕಣ್ಣಿನ ದೃಷ್ಟಿ ಹೋಗಬಹುದು. ಮೆದುಳಿನ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ ಅಥವಾ ಜೀವಕ್ಕೂ ಅಪಾಯವಾಗಬಹುದು ಎಂದು ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವೈದ್ಯ ಡಾ. ಹರೀಶ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಿವಮೊಗ್ಗದಲ್ಲಿ ಇದೇ ಮೊದಲ ಕ್ರೇನಿಯೋಸಿನೋಸ್ಟೊಸಿಸ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇದು ಅತ್ಯಂತ ಕಠಿಣ ಮತ್ತು ಕ್ಲಿಸ್ಟಕರವಾದ ಶಸ್ತ್ರಚಿಕಿತ್ಸೆ. ಈ ಸರ್ಜರಿಗೆ ನರಶಸ್ತ್ರಚಿಕಿತ್ಸಾ ಹಾಗೂ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರು ಹಾಗೂ ಮಕ್ಕಳ ಅರವಳಿಕೆ ತಜ್ಞರಿರಬೇಕು. ಮಕ್ಕಳ ಐಸಿಯು ವ್ಯವಸ್ಥೆ ಇರಬೇಕು ಹಾಗಾಗಿ ಈ ಶಸ್ತ್ರಚಿಕಿತ್ಸೆಗೆ ಒಂದು ತಜ್ಞವೈದ್ಯರ ತಂಡ ಬೇಕಾಗುತ್ತದೆ. ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡುವಂತಹ ಕೇಂದ್ರಗಳು ತುಂಬಾ ವಿರಳ ಎಂದರು.
ತಲೆಬುರುಡೆಯ ಚಿಪ್ಪಿನ ಆಕಾರವನ್ನು ಬದಲಾಯಿಸಿ ಸರಿಯಾದ ಆಕಾರಕ್ಕೆ ಬರುವಂತೆ ಸರಿಪಡಿಸಿ ಅಳವಡಿಸಲಾಗಿದೆ. ಮಗುವಿಗೆ ೮ ತಿಂಗಳು ಇರಬೇಕಾದರೆ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಬಂದು ಮಕ್ಕಳ ತಜ್ಞವೈದ್ಯ ಡಾ. ಕಾವ್ಯ ಅವರ ಬಳಿ ತೋರಿಸಿದಾಗ ಸಿಟಿ ಸ್ಕ್ಯಾನ್‌ನಲ್ಲಿ ಮಗುವಿಗೆ ಕ್ರೇನಿಯೋಸಿನೋಸ್ಟೊಸಿಸ್ ಇರುವುದು ದೃಢಪಟ್ಟಾಗ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದು ಮಗು ಆರೋಗ್ಯವಾಗಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ವೈದ್ಯರುಗಳಾದ ಡಾ. ಚೇತನ್‌ಕುಮಾರ್, ಡಾ. ಅರ್ಜುನ್ ಭಾಗವತ್, ಡಾ. ವಿಜಯಕುಮಾರ್, ಆಡಳಿತಾಧಿಕಾರಿ ಮುರುಳಿಧರ್ ರಾವ್ ಕುಲಕರ್ಣಿ ಇದ್ದರು.