
ಶಿವಮೊಗ್ಗ :- ಆಧುನಿಕ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಸಾಧನೆ ಮಾಡಿದ ವೀರ ವನಿತೆಯರ ಧೈರ್ಯ ಮತ್ತು ಪರೋಪಕಾರ, ಸಮಾಜಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ಖ್ಯಾತ ಇತಿಹಾಸಕಾರ ಡಾ.ಎಸ್.ಜಿ. ಸಾಮಕ್ ಹೇಳಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಿ.ಭೀಮಸೇನರಾವ್ ರಾಷ್ಟ್ರೀಯ ಕಾನೂನು ಕಾಲೇಜು ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಕ ಮಹಾಸಂಘ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಭರತ ವರ್ಷದ ಮೂರು ವೀರ ಮಹಿಳೆಯರಾದ ವೀರರಾಣಿ ಅಬ್ಬಕ್ಕ, ಅಹಲ್ಯಾಬಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ರವರ ಅಚಲ ಮನೋಭಾವ ಧೈರ್ಯ ಮತ್ತು ಪರೋಪಕರ ಸ್ಮರಣೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಾಧನೆಯಿಂದ ಮಾತ್ರ ವ್ಯಕ್ತಿಯ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ರಲು ಸಾಧ್ಯ. ವೀರರಾಣಿ ಅಬ್ಬಕ್ಕ, ಅಹಲ್ಯಾಬಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಅಚಲ ಮನೋಭಾವ ಧೈರ್ಯ ಮತ್ತು ಪರೋಪಕಾರದಿಂದ ಪ್ರಸಿದ್ಧರಾಗಿದ್ದಾರೆ. ವೀರರಾಣಿ ಅಬ್ಬಕ್ಕ ಪೋರ್ಚುಗೀಸರನ್ನು ಕರ್ನಾಟಕದ ನೆಲದಲ್ಲಿ ನೆಲೆಗೊಳ್ಳಲು ಬಿಡದೆ, ಧೈರ್ಯದಿಂದ ಹೋರಾಡಿದ ದಿಟ್ಟ ಮಹಿಳೆ. ಅಬ್ಬಕ್ಕ ರಾಣಿಯ ಆಡಳಿತ, ಸಾಮಾಜಿಕ, ಧಾರ್ಮಿಕ ವಿಚಾರಗಳು, ಸಮರ್ಥವಾಗಿ ಎದುರಿಸುವ ದಿಟ್ಟತನ ತೋರಿದರು.
ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧವಾಗಿ ಹೋರಾಡಿದ ಮೊಟ್ಟ ಮೊದಲ ಭಾರತೀಯ ಮಹಿಳೆ. ಬ್ರಿಟಿಷರು ರೂಪಿಸಿದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಖಂಡಿಸಿ ಹೋರಾಟ ನಡೆಸಿದ ರಾಣಿ ಚೆನ್ನಮ್ಮ, ಅಗಣಿತ ಆದರ್ಶ ಗುಣಗಳನ್ನು ಹೊಂದಿದ ವೀರ ವನಿತೆ. ಮತ್ತೋರ್ವ ರಾಣಿ ಅಹಲ್ಯಬಾಯಿ ಹೋಳ್ಕರ್ ಮಹಾರಾಷ್ಟ್ರದ ಸಾಮಾನ್ಯ ಕುಟುಂಬದಿಂದ ಬಂದರೂ ಕೂಡ, ಹೋಳ್ಕರ್ ಸಾಮ್ರಾಜ್ಯದ ರಾಣಿಯಾಗಿ ಸರಳ ಜೀವನವನ್ನು ನಡೆಸಿ ಸಮಾಜಮುಖಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟರು. ಭಾರತದಾದ್ಯಂತ ೪ಸಾವಿರಕ್ಕೂ ಅಧಿಕ ದೇವಾಲಯಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಹಾಗೂ ಸಾಮಾಜಿಕ ಸಮಸ್ಯೆಗಳಾದ ಸತಿ ಪದ್ಧತಿಯನ್ನು ವಿರೋಧಿಸಿ ವಿಧವಾ ವಿವಾಹಕ್ಕೆ ಮನ್ನಣೆಯನ್ನು ಕೊಟ್ಟಂತಹ ಅಚ್ಚಳಿಯದ ನಕ್ಷತ್ರ ಅಹಲ್ಯಬಾಯಿ ಎಂದು ತಿಳಿಸಿದರು.
ಸಿಬಿಆರ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲ ಅಧ್ಯಕ್ಷತೆಯನ್ನು ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ. ಕಾಂತರಾಜ್.ಎಸ್ ಉಪಸಿತರಿದ್ದರು. ಕಾರ್ಯಕ್ರಮಾಧಿಕಾರಿ ಡಾ. ಎಂ.ಎನ್. ಆದರ್ಶ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾನೂನು ವಿದ್ಯಾರ್ಥಿನಿ ಪ್ರೇರಣ.ಎಂ.ಆರ್ ನಿರೂಪಿಸಿದರು.