
ಶಿವಮೊಗ್ಗ :- ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ, ಜಿಲ್ಲಾ ಅಮೇಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಹಾಗೂ ಮಂಟ್ ಹೀರಾ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ಸೆ. 26-27ರಂದು ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 14 ಮತ್ತು 17ವರ್ಷ ವಯೋಮಿತಿಯೊಳಗಿನ ಶಾಲಾ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಇಂದು ಪತ್ರಿಕಾಗೊಷ್ಟಿಯಲ್ಲಿ ತಿಳಿಸಿದರು.
14 ವರ್ಷ ವಯೋಮಿತಿಯೊಳಗಿನಲ್ಲಿ ಬಾಲಕರ 11 ವಿವಿಧ ತೂಕದ ವಿಭಾಗಗಳು, 17 ವರ್ಷ ವಯೋಮಿತಿಯೊಳಗಿನಲ್ಲಿ ಬಾಲಕರ 13 ವಿವಿಧ ತೂಕದ ವಿಭಾಗಗಳು, 17 ವರ್ಷ ವಯೋಮಿತಿಯೊಳಗಿನಲ್ಲಿ ಬಾಲಕಿಯರ 15 ವಿವಿಧ ತೂಕದ ವಿಭಾಗಗಳು ಇದ್ದು, ಶಾಲಾ ಶಿಕ್ಷಣ ಇಲಾಖೆಯಲ್ಲಿ ಬರುವ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಂದ ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದು, ಆಯ್ಕೆ ಆಗಿ ರಾಜ್ಯ ಮಟ್ಟದ ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದವರು ಮಧ್ಯ ಪ್ರದೇಶ್ ಮತ್ತು ಅರುಣಾಚಲ ಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಜಿಲ್ಲಾ ಅಮೇಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಮಾತನಾಡಿ, ರಾಜ್ಯದ 9 ಜಿಲ್ಲೆಗಳಿಂದ 200 ಬಾಲಕರು, ಹಾಗೂ 150 ಬಾಲಕಿಯರು ಇದರಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಪದಕ ಪಡೆದವರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಈ ಪಂದ್ಯಾವಳಿ ಪ್ರಮುಖವಾಗಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಪಂದ್ಯಾವಳಿ ನಡೆಯುತ್ತಿದ್ದು, ಜಿಲ್ಲೆಯ ವಿವಿಧ ಶಾಲೆಗಳಿಂದ ೧೬ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಆಯ್ಕೆ ಆಗಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕೆ.ಮೆಹಬೂಬ್, ಮೀನಾಕ್ಷಿ, ದೇವರಾಜ್ ನಾಯ್ಕ್, ಅನೂಪ್, ಹರ್ಷಿತ್ ಉಪಸ್ಥಿತರಿದ್ದರು.