google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಔಷಧ ವಿಜ್ಞಾನಕ್ಕೆ ಸಂಗೀತ, ಸಾಹಿತ್ಯ ಸೃಜನಶೀಲತೆಯ ಅವಿನಾಭಾವ ಸಂಬಂಧವಿದ್ದು, ಕ್ರಿಯಾಶೀಲತೆಯ ಮೂಲಕ ಬದುಕಿನ ಸಮಸ್ಯೆಗಳನ್ನು ಎದುರಿಸಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಹೇಳಿದರು.

ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಎನ್.ಸಿ.ಪಿ ಕಲಾಸಂಗಮ-2025’ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಗೀತದಲ್ಲಿ ಔಷಧೀಯ ಗುಣಗಳ ದಿವ್ಯ ಶಕ್ತಿಯಿದೆ. ಪ್ರಾಣಿ ಪಕ್ಷಿಗಳಿಗೂ ದಿವ್ಯ ಔಷಧವಾಗಿ ಮಾನಸಿಕ ನೆಮ್ಮದಿ ನೀಡುತ್ತದೆ. ಮನುಷ್ಯನಿಗೆ ಪರಿಪೂರ್ಣ ನೆಮ್ಮದಿ, ಶಾಂತಿ ಇದ್ದಾಗ ಮಾತ್ರ ವ್ಯಕ್ತಿತ್ವ ಪೂರ್ಣನಾಗಿ ಹೊರಬರಲು ಸಾಧ್ಯ ಮಾಡಿಕೊಡುತ್ತದೆ. ಈ ಹಿನ್ನಲೆಯಲ್ಲಿ ಕ್ರಿಯಾಶೀಲ ಬದುಕನ್ನು ಕಟ್ಟಿಕೊಳ್ಳಿ. ಆಧುನಿಕ‌ ಜಾಲತಾಣ ಎಂಬ ಸಾಂಕ್ರಾಮಿಕ ರೋಗ ನಿಮ್ಮನ್ನು ಭಾದಿಸದಿರಲಿ.

ಔಷಧ ವಿಭಾಗದಲ್ಲಿನ ವ್ಯಾಸಂಗವು, ಖಚಿತ ಉದ್ಯೋಗ ಭರವಸೆಯನ್ನು ನೀಡುತ್ತದೆ. ಮನುಷ್ಯನ ಮೇಲೆ ಔಷಧಗಳು ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಅಭ್ಯಾಸಿಸಿದ್ದಿರಿ. ಇದರೊಂದಿಗೆ ಜವಾಬ್ದಾರಿಯುತವಾಗಿ ರೋಗಿಯ ಆರೈಕೆ ಮತ್ತು ಔಷಧಗಳ ನಿರ್ವಹಣೆ ನಡೆಸಿ ಎಂದು ಫಾರ್ಮಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಯುವ ಜನತೆ ತಾಳ್ಮೆಯ ಕಡೆಗೆ ಹೆಚ್ಚು ಗೌರವ ನೀಡಿ. ಓದು ಬರಹ ನಿಜವಾದ ವಿದ್ಯೆಯಲ್ಲ, ವಿವೇಕ ವಿನಯ ನಿಜವಾದ ವಿದ್ಯಾಭ್ಯಾಸ. ನಮ್ಮ ವ್ಯಕ್ತಿತ್ವ ಸುಂದರವಾಗಿದ್ದರೆ ಮಾತ್ರ ಮನಸ್ಸಿನಲ್ಲಿ ಉಳಿಯಲು ಸಾಧ್ಯ‌. ನಮ್ಮಲ್ಲಿ ಮೂಡುವ ಅನುಮಾನಗಳು ತಪ್ಪಾಗಬಹುದು ಅದರೇ ಅನುಭವಗಳು ಎಂದಿಗೂ ತಪ್ಪಾಗಲಾರದು. ಹೆತ್ತವರ ಹಿರಿತನಕ್ಕೆ ಗೌರವ ನೀಡಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಬೆಂಗಳೂರಿನ ಹರ್ಬ್ ಅರ್ಟಿಜನ್ ಕಂಪನಿಯ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಜಿ.ಎಂ.ಗುರುರಾಜ್ ಮಾತನಾಡಿ, ಗುರಿಯ ಸ್ಪಷ್ಟತೆಯನ್ನು ಹೊಂದಿ. ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯತೆಗಳು ಸಾಧನೆಯ ಪರಿಪೂರ್ಣ ಹಂತಕ್ಕೆ ತಲುಪಲು ಸಾಧ್ಯ ಮಾಡಿಕೊಡಲಿದೆ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಸ್ಪರ್ಧಾತ್ಮಕ ಮನೋಭಾವ ಅಭಿವ್ಯಕ್ತಿಗೊಳಿಸಲು ಮತ್ತು ಕ್ರಿಯಾಶೀಲ ಚಟುವಟಿಕೆಗಳಿಗೆ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲು ಪಠ್ಯೇತರ ಚಟುವಟಿಕೆಗಳು ಸಾಧ್ಯ ಮಾಡಿಕೊಡಲಿದೆ. ಔಷಧ ಕ್ಷೇತ್ರದಲ್ಲಿ ಪ್ರತಿನಿತ್ಯ ವಿಪುಲ ಬದಲಾವಣೆ ನಡೆಯುತ್ತಿದ್ದು, ವಾಸ್ತವತೆಗೆ ಹೊಂದಿಕೆಯಾಗುವಂತೆ ನಿಮ್ಮನ್ನು ನೀವು ಕೌಶಲ್ಯಾಧಾರಿತವಾಗಿ ತೆರೆದುಕೊಳ್ಳಿ. ವಿದ್ಯಾರ್ಥಿ ಹಂತದಲ್ಲಿಯೆ ಸ್ಕೂಪಸ್ ಇಂಡೆಕ್ಸ್ ನಂತಹ ಅಂತರಾಷ್ಟ್ರೀಯ ಪ್ರಕಾಶನದಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು‌.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ನಾರಾಯಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಎಂ.ಫಾರ್ಮ್ ಫಾರ್ಮಾಸ್ಯುಟಿಕ್ಸ್ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ಬಂಗಾರದ ಪದಕ ಪಡೆದ ಕಾಲೇಜಿನ ವಿದ್ಯಾರ್ಥಿನಿ ಸಂಜನಾ, ಒಂಬತ್ತನೇ ರ‌್ಯಾಂಕ್ ಪಡೆದ ವಿದ್ಯಾರ್ಥಿನಿ ಜುವೈರಿಯಾ ಖಾನಂ, ಫಾರ್ಮಾಕಾಗ್ನಸಿ ವಿಭಾಗದಲ್ಲಿ ಏಳನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಲಿಖಿತ. ಕೆ ಸೇರಿದಂತೆ  ಬಿ.ಫಾರ್ಮ್ ವಿವಿಧ ಕೋರ್ಸ್‌ಗಳ ರ‌್ಯಾಂಕ್ ವಿಜೇತ ಮತ್ತು ವಿವಿಧ ಕ್ಷೇತ್ರಗಳ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *