ಶಿವಮೊಗ್ಗ : ದೇವರು ನಮಗೆ ನೀಡಿದ್ದನ್ನು ಬೇರೆಯವರಿಗೆ ನೀಡುತ್ತಾ ಇದ್ದೇವೆ ಎಂಬ ವಿನೀತ ಮನೋಭಾವನೆಯೇ ದಾಸೋಹ. ಅಗತ್ಯ ಇರುವವರಿಗೆ ಸೇವೆ ಮಾಡಿದರೆ ನಮ್ಮಲ್ಲಿನ ಅಹಂಕಾರ ತೊಲಗುತ್ತದೆ. ಹಂಚಿಕೊಂಡು ಉಣ್ಣುವುದರಲ್ಲಿ ಇರುವ ತೃಪ್ತಿ ಕೋಟಿ ಹಣ ಕೊಟ್ಟರೂ ಸಿಗುವುದಿಲ್ಲ ಎಂದು ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಅವರು ಇಂದು ಅಮೃತ ಅನ್ನದಾಸೋಹ ಪ್ರತಿಷ್ಠಾನಕ್ಕೆ 100 ದಿನದ ಸಂಭ್ರಮದ ಹಿನ್ನೆಲೆಯಲ್ಲಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಸಂಭ್ರಮಾಚರಣೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ, ಮೆಗ್ಗಾನ್ ಆಸ್ಪತ್ರೆಯಲ್ಲಿ ಆರೋಗ್ಯ ದಾಸೋಹದ ಜೊತೆಗೆ ಅಮೃತ ಅನ್ನದಾಸೋಹ ಪ್ರತಿಷ್ಠಾನದಿಂದ ಅನ್ನದಾಸೋಹ ನಡೆಯುತ್ತಿರುವುದು ಶ್ಲಾಘನೀಯ. ಸಕಲ ಜೀವರಾಶಿಗೂ ಮೊದಲ ಬಯಕೆಯೇ ಹಸಿವು ಆಗಿರುತ್ತದೆ. ಹಸಿವಿನ ಅವಶ್ಯಕತೆ ಮೊದಲು ಈಡೇರಿದರೆ ಮನುಷ್ಯ ನಂತರದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಾನೆ. ಇದು ಸಾಮಾನ್ಯ ಸೇವೆಯಲ್ಲ, ಅತೀ ದೊಡ್ಡ ಸೇವೆ. ನಾನು ದಾಸನಿದ್ದೇನೆ ಎಂಬ ಮನೋಭಾವನೆಯೇ ದಾಸೋಹ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಿ.ಎಸ್. ಅರುಣ್ ಮಗುವಿಗೆ ತಾಯಿ ಬಡಿಸಿದಾಗ ನೆಮ್ಮದಿ, ಸುಖ ಸಿಗುತ್ತದೆ. ಬಡಿಸುವುದು ಒಂದು ಭಾವನಾತ್ಮಕ ಸಂಬಂಧವನ್ನು ಉಂಟುಮಾಡುತ್ತದೆ. ಬಡಿಸಿದಾಗ ಮತ್ತು ಏನಾದರೂ ಕೊಡುವಾಗ ಸಿಗುವ ತೃಪ್ತಿ, ನೆಮ್ಮದಿ ಅದು ಮನುಷ್ಯನಿಗೆ ಉನ್ನತ ಮಟ್ಟಕ್ಕೇರಿಸುತ್ತದೆ. ಜೀವನದ ಕೊನೆಗೇ ಸಿಗುವ ತೃಪ್ತಿ ಮೊದಲ ಹಂತದಲ್ಲೇ ಸಿಗುತ್ತದೆ. ಕೊಡುವ ಮನೋಭಾವ ಭಾರತೀಯ ಸಂಸ್ಕೃತಿಯಾಗಿದೆ. ನಮ್ಮ ಕುಟುಂಬದಿಂದಲೂ ವಾರಕ್ಕೆ ಒಂದು ದಿನ ಈ ವ್ಯವಸ್ಥೆಗೆ ನಾವು ಕೈಜೋಡಿಸಿದ್ದು, ಮುಂದಿನ ಎರಡು ವರ್ಷಕ್ಕೆ ನಿರಂತರವಾಗಿ ಈ ಸೇವೆ ಸಲ್ಲಿಸಲು ನಮ್ಮ ಕುಟುಂಬದಲ್ಲಿ ಈಗಾಗಲೇ ಸರದಿಯಲ್ಲಿ ಕಾಯುತ್ತಿದ್ದಾರೆ ಎಂದರು.
ಮೊದಲು ಈ ಸೇವೆಗೆ ಕೈಜೋಡಿಸುತ್ತಿರುವ ಮತ್ತು ನಿರಂತರವಾಗಿ ನಡೆಸುತ್ತಿರುವ ಅಮೃತ ಅನ್ನದಾಸೋಹ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಸಿಮ್ಸ್ ನಿರ್ದೇಶಕ ಡಾ|| ವಿರೂಪಾಕ್ಷಪ್ಪ ಮಾತನಾಡಿ, ಮೆಗ್ಗಾನ್ ಬೋಧನಾ ಆಸ್ಪತ್ರೆ ಸಧ್ಯದಲ್ಲೇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಾಗಿ ಉನ್ನತ ದರ್ಜೆಗೆ ಏರಲಿದ್ದು, ಅದಕ್ಕೆ ಬೇಕಾದ ತಜ್ಞವೈದ್ಯರು, ಆಪರೇಷನ್ ಥೇಟರ್ ಮತ್ತು ಮೂಲಭೂತ ಸೌಲಭ್ಯಗಳು ಶೀಘ್ರದಲ್ಲೇ ದೊರೆಯಲಿದೆ. ಈಗಲೇ ಯಾವುದೇ ಅಪಪ್ರಚಾರ ಇದ್ದರೂ ಪ್ರತಿನಿತ್ಯ ಮೂರು ಸಾವಿರ ಹೊರ ರೋಗಿಗಳು, 1200 ಒಳರೋಗಿಗಳು ಈ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಪೋರೇಟ್ ಆಸ್ಪತ್ರೆಗಳು ಮಾಡದ ಚಿಕಿತ್ಸೆಯನ್ನು ಇಲ್ಲಿ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಉಳ್ಳವರು ಕೂಡ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಇಂತಹ ಭಾರೀ ಪ್ರಮಾಣದ ರೋಗಿಗಳ ಒತ್ತಡದ ನಡುವೆಯೂ ಕೆಲವೊಂದು ಸಣ್ಣ ಲೋಪವಾದರೆ ಅದು ದೊಡ್ಡ ಹೈಲೈಟ್ ಆಗುತ್ತದೆ. ಇರುವ ವ್ಯವಸ್ಥೆಯನ್ನು ಜೋಡಿಸಿಕೊಂಡು ದೊಡ್ಡ ಪ್ರಮಾಣದಲ್ಲಿ ಮೆಗ್ಗಾನ್ ಆಸ್ಪತ್ರೆ ಧನಾತ್ಮಕ ಸೇವೆ ನೀಡುತ್ತಿದೆ. ಅದರ ನಡುವೆ ಈ ಅಮೃತ ಪ್ರತಿಷ್ಠಾನದವರು ಯಶಸ್ವಿಯಾಗಿ ಅನ್ನದಾಸೋಹ ಯೋಜನೆ ಮುಂದುವರಿಸಿಕೊಂಡು ಬಂದಿದ್ದಾರೆ. ಅವರಿಗೂ ಕೂಡ ಮುಂದಿನ ದಿನದಲ್ಲಿ ಶಾಶ್ವತವಾದ ಶೆಡ್ ನಿರ್ಮಾಣ, ರೋಗಿಗಳ ಸಂಬಂಧಿಕರಿಗೆ ಉಳಿದುಕೊಳ್ಳಲು ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಅತ್ಯಾಧುನಿಕ ಸೂಪರ್ ಸ್ಪೇಷಾಲಿಟಿ ವಿಭಾಗಗಳು ಎಲ್ಲವೂ ಕೂಡ ಲಭ್ಯವಾಗಲಿದೆ ಎಂದರು.
ಜಿಲ್ಲಾ ಸರ್ಜನ್ ಡಾ|| ಸಿದ್ದನಗೌಡ ಪಾಟೀಲ್ ಮಾತನಾಡಿ, ತ್ರಿವಿದ ದಾಸೋಹ ನಮ್ಮ ದೇಶದಲ್ಲಿ 12ನೇ ಶತಮಾನದಿಂದ ನಡೆಯುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನು ನಡೆಸುವುದು ಕಷ್ಟ. ಮೆಗ್ಗಾನ್ ಕ್ಯಾಂಪಸ್ ಒಳಗೆ ಪ್ರತಿನಿತ್ಯ ರೋಗಿಗಳು, ವಿದ್ಯಾರ್ಥಿಗಳು ಮತ್ತು ರೋಗಿಯ ಸಂಬಂಧಿಕರು ಸೇರಿದಂತೆ 12000 ಜನ ಓಡಾಡುತ್ತಿದ್ದಾರೆ. ಅದರ ಒತ್ತಡದ ನಡುವೆಯೂ ಈ ಉತ್ತಮ ಕಾರ್ಯ ನಡೆಯುತ್ತಿದೆ. ದಾನಿಗಳು ಇದಕ್ಕೆ ಹೆಚ್ಚಿನ ನೆರವು ನೀಡಬೇಕು ಎಂದರು.
ಪ್ರತಿಷ್ಠಾನದ ಅಧ್ಯಕ್ಷರಾದ ಡಾ|| ಎ. ಸತೀಶ್‌ಕುಮಾರ್ ಶೆಟ್ಟಿ ಮಾತನಾಡಿ, ಪ್ರತಿನಿತ್ಯ ವಾರದಲ್ಲಿ ಏಳೂ ದಿನವೂ 500ಕ್ಕೂ ಹೆಚ್ಚು ಜನ ಈ ದಾಸೋಹದ ಲಾಭ ಪಡೆಯುತ್ತಾರೆ. ಬಡಿಸುವುದಷ್ಟೇ ಅಲ್ಲ ನಮ್ಮ ಕಾರ್ಯಕರ್ತರು ಆ ಜಾಗವನ್ನು ಸ್ವಚ್ಛಗೊಳಿಸುತ್ತಾರೆ. ದಾನಿಗಳು ಕೂಡ ಹರಿದು ಬರುತ್ತಿದ್ದಾರೆ. ನಮ್ಮ ಪ್ರತಿಷ್ಠಾನ ಅತ್ಯಂತ ಪ್ರಾಮಾಣಿಕತೆಯಿಂದ ಮತ್ತು ಶುಚಿತ್ವದಿಂದ ಈ ಶ್ರೇಷ್ಠ ಕೆಲಸ ಮಾಡುತ್ತಿದೆ. ಇನ್ನು ನಮಗೆ ದಾನಿಗಳ ಅಗತ್ಯವಿದೆ. ದಾನಿಗಳ ನೆರವು ಬಂದರೆ ಇಂತಹ ನೂರಾರು ಕಾರ್ಯಗಳು ಮುಂದುವರೆಯುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರಭಾಕರ್ ಎನ್.ಹೆಚ್., ಕಾರ್ಯದರ್ಶಿ ಟಿ.ಆರ್. ಸತ್ಯನಾರಾಯಣ್, ನಿರ್ದೇಶಕರಾದ ದಿವಾಕರಶೆಟ್ಟಿ ಮತ್ತು ಪ್ರತಿಷ್ಠಾನದ ಕಾರ್ಯಕರ್ತರು, ದಾನಿಗಳು, ನಿರ್ದೇಶಕರು ಉಪಸ್ಥಿತರಿದ್ದರು.