
ಶಿವಮೊಗ್ಗ :- ಶಿವಮೊಗ್ಗ ಜಿಲ್ಲಾ 24 ಮನೆ ಸಾಧುಶೆಟ್ಟಿ ಮಹಿಳಾ ಸಂಘದ ವತಿಯಿಂದ ಆ. 4ರಂದು ಬೆಳಿಗ್ಗೆ 10 ಗಂಟೆಗೆ ಮಿಷನ್ ಕಾಂಪೌಂಡ್ನಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಶ್ರೀ ಕಾಮಾಕ್ಷಿ ಸಮುದಾಯ ಭವನದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ನಾಗರತ್ನ ಸೋಮಶೇಖರ್ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಾಧುಶೆಟ್ಟಿ ಮಹಿಳಾ ಸಂಘವು ಮಿಷನ್ ಕಾಂಪೌಂಡ್ ಬಡಾವಣೆಯಲ್ಲಿರುವ 1ನೇ ಮುಖ್ಯ ರಸ್ತೆಯ, 1ನೇ ಅಡ್ಡರಸ್ತೆ, ಜ್ಯೂವೆಲ್ರಾಕ್ ಹೋಟೆಲ್ ಪಕ್ಕದಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಿಸಿದೆ. ಈ ಸಮುದಾಯ ಭವನವು ಶಾಸಕರುಗಳ ಅನುದಾನ ಮತ್ತು ಸಮಾಜದವರ ಕೊಡುಗೆಯಿಂದ ನಿರ್ಮಿಸಲಾಗಿದೆ ಎಂದರು.

ಆ. 4ರಂದು ಉದ್ಘಾಟನಾ ಸಮಾರಂಭ ಇದ್ದರೆ ಆ. 3ರಂದು ಸಂಜೆ ಹೋಮ, ಹವನ, ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಗಂಗಾಪೂಜೆ ಕೂಡ ನಡೆಯಲಿದ್ದು, ಸಮಾಜದ ಮುಖಂಡರು ಇದರಲ್ಲಿ ಭಾಗವಹಿಸುತ್ತಾರೆ. ಸಮುದಾಯ ಭವನವನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರೆ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಭೋಜನಾಲಯವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರುಗಳಾದ ಎಸ್.ಎನ್. ಚನ್ನಬಸಪ್ಪ, ಬಲ್ಕೀಶ್ಬಾನು, ಡಿ.ಎಸ್. ಅರುಣ್, ಡಾ, ಧನಂಜಯ ಸರ್ಜಿ, ಮಾಜಿ ಸೂಡಾ ಅಧ್ಯಕ್ಷರಾದ ವಿ. ರಾಜು, ಎನ್. ರಮೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶೋಭಾ ಕೆ.ಆರ್., ಬೆಂಗಳೂರಿನ ತಹಶೀಲ್ದಾರ್ ಕೇಶವಮೂರ್ತಿ, ಶಿವಮೊಗ್ಗ ಸಾಧುಶೆಟ್ಟಿ ಸಮಾಜದ ಅಧ್ಯಕ್ಷ ಎನ್. ಉಮಾಪತಿ, ಬೆಂಗಳೂರು ದಕ್ಷಿಣದ ತಹಶೀಲ್ದಾರ್, ಜಿ. ಅಶ್ವಿನಿ ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ ಎಂದರು.
ಈ ಸಮಾರಂಭಕ್ಕೆ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರುಗಳು ಸಹಕಾರ ನೀಡುತ್ತಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿಮ ಮಾಜಿ ಸೂಡಾ ಅಧ್ಯಕ್ಷ ವಿ.ರಾಜು, ಸಂಘದ ಪದಾಧಿಕಾರಿಗಳಾದ ಗುಣಮ್ಮ ಕೃಷ್ಣಮೂರ್ತಿ, ವನಜಕ್ಷಿ ಎಲ್. ಆದಿಶೇಷ, ಆರ್. ಸರಸ್ವತಮ್ಮ ವೆಂಕಟೇಶ್, ಲಕ್ಷಮ್ಮ ನರಸಿಂಹಮೂರ್ತಿ, ಭಾಗ್ಯಲಕ್ಷ್ಮೀ ವೆಂಕಟೇಶ್, ಸಲಹೆಗಾರ ಶಿ.ದು. ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.