ಶಿವಮೊಗ್ಗ : ಗೋಪಾಲಗೌಡ ಬಡಾವಣೆಯ ಸಮಸ್ಯೆಗಳು ಹಾಗೂ ಚಂದನವನ ಪಾರ್ಕಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಡಾವಣೆಯ ನಿವಾಸಿಗಳು ಮತ್ತು ಚಂದನವನ ಪಾರ್ಕಿನ ಸದಸ್ಯರು ಇಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಪಾಲಿಕೆ ಅಧಿಕಾರಿಗಳಾದ ಜ್ಯೋತಿ(ಎಇಇ) ಮತ್ತು ಲೀಲಾ (ಜೆಇ) ಇಂದು ಬೆಳಿಗ್ಗೆ ಪಾರ್ಕಿಗೆ ಭೇಟಿನೀಡಿ, ಕಾಮಗಾರಿಗಳ ಪರಿಶೀಲನೆ ನಡೆಸಿ, ಮನವಿ ಸ್ವೀಕರಿಸಿದರು.
ಚಂದನ ಪಾರ್ಕಿನಲ್ಲಿ ರಾಜಕಾಲುವೆ ದುರಸ್ಥಿಕಾರ್ಯ ನಡೆಯುತ್ತಿದ್ದು, ಬೇಗನೆ ಕ್ರಮಕೈಗೊಳ್ಳಬೇಕು. ಪಾರ್ಕಿನ ಅಭಿವೃದ್ಧಿಗಾಗಿ ಎರಡು ಕೋಟಿಗಳ ರೂ.ಗಳ ಅನುದಾನಕ್ಕೆ ಮನವಿ ಮಾಡಿದ್ದು, ಅದಕ್ಕೆ ಕ್ರಮಕೈಗೊಳ್ಳಬೇಕು. ಪಾರ್ಕಿನಲ್ಲಿರುವ ಲೈಟ್‌ಗಳನ್ನು ದುರಸ್ತಿಗೊಳಿಸಬೇಕು. ಪಾರ್ಕಿಗೆ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹಾಗೆಯೇ ಬಡಾವಣೆಯ ಸಮಸ್ಯೆಗಳಾದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಪ್ರಮುಖವಾಗಿ ೧೦೦ ಅಡಿ ರಸ್ತೆಯ ಆಲ್ಕೋಳ ವೃತ್ತದಿಂದ ಕೇಕ್ ಕೆಫೆವರೆಗೂ ಇರುವ ತಿಂಡಿಗಾಡಿಗಳನ್ನು ತೆರವುಗೊಳಿಸಬೇಕು. ಬಡಾವಣೆಯಲ್ಲಿ ಬರುವ ಎಲ್ಲಾ ಪಾರ್ಕ್‌ಗಳನ್ನು ಸ್ವಚ್ಛಗೊಳಿಸಬೇಕು. ಬೀದಿ ನಾಯಿ, ಹಂದಿ, ಕುದುರೆಗಳ ಹಾವಳಯನ್ನು ನಿಯಂತ್ರಿಸಬೇಕು. ಫಾಗಿಂಗ್ ಸಿಂಪಡಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪಾರ್ಕಿನ ಗೌರವಾಧ್ಯಕ್ಷ ಕಲಗೋಡು ರತ್ನಾಕರ್, ಅಧ್ಯಕ್ಷ ಜಯಕುಮಾರ್ ಗೌಡ್ರು, ಕಾರ್ಯದರ್ಶಿ ಗುರುರಾಜ್ ಹಾಗೂ ಪ್ರಮುಖರಾದ ಶಿವಕುಮಾರ್ ಜಿ.ಎ.ಸ್., ರಾಜಶೇಖರ್, ರೈಲ್ವೆಪ್ರಸಾದ್, ಅಶೋಕ್, ರುದ್ರಾನಾಯ್ಕ, ನವಲಪ್ಪ, ಬೋರೇಗೌಡ, ರವಿ, ನಾಗರಾಜ್, ಹಾಲೇಶಪ್ಪ, ದೇವ್ಲಾನಾಯ್ಕ, ದೇವರಾಜ್, ಜಿ. ಕೆಂಚಪ್ಪ ಸೇರಿದಂತೆ ಹಲವರಿದ್ದರು.