ಶಿವಮೊಗ್ಗ :- ಅನವರತ ತಂಡದಿಂದ ವಿವೇಕ ವಿದ್ಯಾನಿಧಿ ಸ್ಥಾಪಿಸಿ ನಗರ ವಿಧಾನಸಭಾ ಕ್ಷೇತ್ರದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ 9ನೇ ತರಗತಿಯಲ್ಲಿ ಮತ್ತು ಪ್ರಥಮ ಪಿಯುಸಿಯಲ್ಲಿ ಶೇ. 50ರಿಂದ 75 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ವಿದ್ಯಾರ್ಥಿವೇತನ ನೀಡಲು ತೀರ್ಮಾನಿಸಿರುವುದಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.
ಇಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ 110 ಪ್ರೌಢಶಾಲೆ, 38 ಪಿಯು ಕಾಲೇಜಿನ 13,825 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ಸುಮಾರು 1 ಸಾವಿರ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ವಿದ್ಯಾರ್ಥಿ ವೇತನ ನೀಡಲು ಕೆಲವು ಮಾನದಂಡಗಳೊಂದಿಗೆ ತೀರ್ಮಾನಿಸಲಾಗಿದ್ದು, ನಾಳೆಯಿಂದಲೇ ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ವಿದ್ಯಾರ್ಥಿವೇತನದ ಅರ್ಜಿ ನೀಡಲಾಗುವುದು. ಆ. 15ರೊಳಗೆ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದರು.
ಅತ್ಯಂತ ಕೆಳಹಂತದ ವಿದ್ಯಾರ್ಥಿಗಳಿಗೂ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಲ್ಲಿ ಅನವರತ ತಂಡ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಅರ್ಜಿ ಶುಲ್ಕ 10 ರೂ. ಇರುತ್ತದೆ. ಅರ್ಜಿದಾರರು ಮತ್ತು ಅವರ ಪೋಷಕರ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಫೋಟೋ ಹಾಗೂ ಶಾಲಾ ದಾಖಲಾತಿ ಮಾಹಿತಿ ಅಗತ್ಯವಿರುತ್ತದೆ. ಈ ಸೌಲಭ್ಯ ಪಡೆಯಲು ಅವರು ವಿನಂತಿಸಿದರು.
ಪೌರ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಅವರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಬೇಕು ಮತ್ತು ಬಿಜೆಪಿ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು. ಮೆಗ್ಗಾನ್ ದುರವಸ್ಥೆಗೆ ಸಂಬಂಧಿಸಿದಂತೆ ಮೆಗ್ಗಾನ್ ಮತ್ತು ಸಿಮ್ಸ್ ಆಡಳಿತದೊಂದಿಗೆ ಈಗಾಗಲೇ ವಿಶೇಷ ಸಭೆ ಕರೆದಿದ್ದೇನೆ. ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ನಾಗರಾಜ್, ಮೋಹನ್ ಶೆಟ್ಟಿ, ಪ್ರಭಾಕರ್, ನವೀನ್, ಪ್ರಿಯಾ, ಪೃಥ್ವಿ ಗೌಡ, ಜಗದೀಶ್, ಪ್ರಭುರಾಜ್, ಮೋಹನ್ ರೆಡ್ಡಿ ಮತ್ತಿತರರು ಇದ್ದರು.