
ಶಿವಮೊಗ್ಗ :- ಜಿಲ್ಲೆಯ ಆರೋಗ್ಯ ಕಾಪಾಡುವಲ್ಲಿ ಮೆಗ್ಗಾನ್ ಆಸ್ಪತ್ರೆಯ ಪಾತ್ರ ಪ್ರಮುಖವಾಗಿದ್ದರೂ ಅದು ಆಗಾಗ ಸುದ್ದಿಯಾಗುತ್ತಿದೆ. ಈಗ ಜಿಲ್ಲಾಸ್ಪತ್ರೆ ಸ್ಥಳಾಂತರವಾಗುತ್ತದೆ ಎನ್ನಲಾಗುತ್ತಿದೆ. ಯಾವ ತಾಲೂಕಿಗೆ ಎಂಬುದು ಗೊತ್ತಿಲ್ಲ. ಆದರೂ ಗುಸುಗುಸು ಆರಂಭವಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲಾ ಆಸ್ಪತ್ರೆಯು ಎಲ್ಲಿದೆಯೋ ಅಲ್ಲೇ ಮುಂದುವರಿಯಬೇಕಿದೆ. ಯಾವ ತಾಲೂಕಿಗೂ ಹೋಗುವುದು ಬೇಡ. ಬೇರೆ ಕಡೆ ಆರು ಎಕರೆ ಗುರುತಿಸಿ ಆಸ್ಪತ್ರೆ ಮಾಡುವುದು ಬೇಡ. ಈಗಿರುವ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ಮಂಗನ ಕಾಯಿಲೆ ಜಿಲ್ಲೆಯನ್ನು ವ್ಯಾಪಕವಾಗಿ ಭಾದಿಸುತ್ತಿದೆ. ಈ ಹಿಂದೆ ಡೆಪ್ಯೂಟಿ ಡೈರೆಕ್ಟರ್ ಮಟ್ಟದ ಅಧಿಕಾರಿ ನೇಮಕಮಾಡಲಾಗಿತ್ತು. ಇವರು ನಾಲ್ಕುಜಿಲ್ಲೆಗೆ ಪ್ರವಾಸ ಮಾಡುತ್ತಿದ್ದರು. ಅಧಿಕಾರ ಇತ್ತು. ಈಗ ಚೀಪ್ ಮೇಡಿಕಲ್ ಆಫೀಸರ್ ನೇಮಕ ಮಾಡಲಾಗಿದೆ. ಇವರಿಗೆ ಯಾವುದೇ ಅಧಿಕಾರವಿಲ್ಲ. ಮೃತಪಟ್ಟವರ ಮನೆಗಳಿಗೆ ತೆರಳಿ ಹಾರ ಹಾಕಿ ಬರುವುದೇ ಇವರ ಕೆಲಸವಾಗಿದೆ ಎಂದರು.
ರಾಜ ಕಾಲುವೆಗಳಲ್ಲಿನ ಹೂಳು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಮಿಳಘಟ್ಟ ಸಂತೆಗೆ ಜಗ ಸರಿಯಾಗಿಲ್ಲ. ರಸ್ತೆ ಮೇಲೆಯೇ ಸರಕು ಸಾಮಾನಿಟ್ಟು ಮಾರಾಟ ಮಾಡಲಾಗುತ್ತಿದೆ. ಇದರಿಂದ ತೊಂದರೆಯಾಗುತ್ತಿದೆ. ಈ ಸಂತೆ ಜಗ ಸ್ಥಳಾಂತರ ಮಾಡಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ ಇದೂವರೆಗೂ ಆಗಿಲ್ಲ. ಹೀಗಾಗಿ ತಕ್ಷಣ ಸಂತೆ ಜಗ ಸ್ಥಳಾಂತರ ಮಾಡಲು ಆಯುಕ್ತರು ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ನಗರ ಪಾಲಿಕೆಯಿಂದ ಕೋಟ್ಯಂತರ ರೂ. ಖರ್ಚುಮಾಡಿ, ಕಾಂಫ್ಲೆಕ್ಸ್‌ಗಳನ್ನು ಮಾಡಿದ್ದರೂ ಬಾಡಿಗೆ ನೀಡಿಲ್ಲ. ಗಾರ್ಡನ್ ಏರಿಯಾದಲ್ಲಿನ ಕಟ್ಟಡ, ಶಿವಪ್ಪನಾಯಕ ವೃತ್ತದಲ್ಲಿನ ಕಟ್ಟಡ ವೆಂಕಟೇಶ ನಗರದಲ್ಲಿನ ಕಟ್ಟಡ ಇನ್ನು ಬಾಡಿಗೆ ನೀಡಿಲ್ಲ. ಇದ್ದ ಕಟ್ಟಡಗಳನ್ನು ಒಡೆದು ಹಾಕಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಗತಿ ಆಗಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳು ಗೋಪಾಲ, ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ಸಂಗಯ್ಯ, ಸಂತೋಷ್, ಉಮಾಶಂಕರ ಉಪಾಧ್ಯಾ, ರಘು, ಸುನಿಲ್ ಗೌಡ, ಗೋಪಿ ಮೊದಲಿಯಾರ್, ದಯಾನಂದ್, ನಿಹಾಲ್ ಇದ್ದರು.